ಜಿಗಳಿ : ರಕ್ತದಾನ ಶಿಬಿರದಲ್ಲಿ ಟಿಹೆಚ್‌ಓ ಡಾ. ಚಂದ್ರಮೋಹನ್
ಮಲೇಬೆನ್ನೂರು, ಆ.17- ಜಿಗಳಿ ಗ್ರಾ.ಪಂ. ಕಛೇರಿಯಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಗ್ರಾಮದ ಕೆಪ್ಪಬಸಣ್ಣರ್ ಯೋಗೇಶ್, ಅಜಯ್ ಇವರ ಸ್ಮರಣಾರ್ಥವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 51 ಜನರು ರಕ್ತದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದರು.
ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಟಿಹೆಚ್‌ಓ ಡಾ. ಚಂದ್ರಮೋಹನ್ ಅವರು ರಕ್ತದಾನ ಮಹಾದಾನ ವಾಗಿದ್ದು, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ.
ದೇಹದಲ್ಲಿ ಹೊಸ ರಕ್ತ ಚಲನೆಯಿಂದಾಗಿ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಹೃದಯಾಘಾತವನ್ನು ಶೇ. 70 ಕ್ಕಿಂತಲೂ ಜಾಸ್ತಿ ಪಡೆಯಲು ಸಹಕಾರಿ ಆಗುತ್ತದೆ. ಜೊತೆಗೆ ರಕ್ತದ ಒತ್ತಡ ಸೇರಿದಂತೆ ಇತರೆ ರೋಗಗಳನ್ನು ತಡೆಗಟ್ಟಲು ರಕ್ತದಾನ ಸಹಕಾರಿ ಆಗಲಿದೆ.
ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಮಾತನಾಡಿ, 18 ವರ್ಷ ಮೇಲ್ಪಟ್ಟವರು ಮತ್ತು 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನ ಮಾಡುವ ವ್ಯಕ್ತಿ ಕನಿಷ್ಟ 45 ಕೆಜಿ ತೂಕ ಇರಬೇಕು. ಆರೋಗ್ಯವಂತರು ಪ್ರತಿ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದೆಂದರು.
ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಭಾಗ್ಯಮ್ಮ, `ಜನತಾವಾಣಿ’ ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ್, ಜಿಗಳಿ ಗ್ರಾ.ಪಂ. ಸದಸ್ಯರಾದ ಡಿ.ಎಂ. ಹರೀಶ್, ಕೆ.ಜಿ. ಬಸವರಾಜ್, ವಿನಾಯಕನಗರ ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಶಿಕ್ಷಕರಾದ ಲಿಂಗರಾಜ್, ಗುಡ್ಡಪ್ಪ ಸೇರಿದಂತೆ, ಗ್ರಾಮದ ಯುವಕರು, ಮಹಿಳೆಯರು, ಗ್ರಾ.ಪಂ. ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಗ್ರಾ.ಪಂ. ಸದಸ್ಯ ಎನ್.ಎಂ. ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರಕಾಶ್, ಎ.ಆರ್. ತಿಪ್ಪೇಸ್ವಾಮಿ, ಪ್ರಹ್ಲಾದ್, ಸಮುದಾಯ ಆರೋಗ್ಯಾಧಿಕಾರಿ ಪೂಜಾ, ಆಪ್ತ ಸಮಾಲೋಚಕ ಕಿರಣ್‌ಕುಮಾರ್, ದಾವಣಗೆರೆ ರಕ್ತನಿಧಿ ಕೇಂದ್ರದ ಡಾ. ಅನುಷ, ರಾಘವೇಂದ್ರ ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತರಾದ ವನಜಾಕ್ಷಮ್ಮ, ನೇತ್ರಾವತಿ, ಮಂಜಮ್ಮ, ಲತಾ, ಶಂಕ್ರಮ್ಮ, ನಿರ್ಮಲ, ಗ್ರಾ.ಪಂ. ಕಾರ್ಯದರ್ಶಿ ಸುಜಾತ, ಸಿಬ್ಬಂದಿಗಳಾದ ಬಿ.ಮೌನೇಶ್, ಬಸವರಾಜಯ್ಯ, ಮುತ್ತು ಹಾಗೂ ಗ್ರಾಮದ ಯುವಕರು ಹಾಜರಿದ್ದು ಶಿಬಿರದ ಯಶಸ್ಸಿಗೆ ಶ್ರಮಿಸಿದರು.