ನೆಮ್ಮದಿ, ಆರೋಗ್ಯವನ್ನು ಕಿತ್ತುಕೊಳ್ಳುವ ದುಶ್ಚಟಗಳಿಂದ ಹೊರಬನ್ನಿ

ನೆಮ್ಮದಿ, ಆರೋಗ್ಯವನ್ನು ಕಿತ್ತುಕೊಳ್ಳುವ ದುಶ್ಚಟಗಳಿಂದ ಹೊರಬನ್ನಿ

ಕೊಮಾರನಹಳ್ಳಿ : ಮದ್ಯವರ್ಜನೆ ಶಿಬಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕರಾದ ಗೀತಾ ಕಿವಿಮಾತು

ಮಲೇಬೆನ್ನೂರು, ಆ.17- ದುಶ್ಚಟಗಳು ನಿಮ್ಮ ಹಾಗೂ ನಿಮ್ಮ ಕುಟುಂಬದ ಸಂತೋಷ, ನೆಮ್ಮದಿ, ಆರೋಗ್ಯವನ್ನು ಕಿತ್ತುಕೊಂಡಿದ್ದು, ಆ ಬಂಧನದಿಂದ  ಹೊರ ಬನ್ನಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಶಿಬಿರಾರ್ಥಿಗಳಿಗೆ ಮನವಿ ಮಾಡಿದರು.

ಗುರುವಾರ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ 1705 ನೇ ಮದ್ಯವರ್ಜನೆ ಶಿಬಿರದ 7ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಮನಸ್ಸು ಚಂಚಲ ಹಾಗಾಗಿ ದುಶ್ಚಟಗಳ ವಿಷಯದಲ್ಲಿ ಎಲ್ಲರೂ ಸದಾ ಎಚ್ಚರವಾಗಿರಬೇಕು. ಮೈಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಗೀತಾ ಅವರು, ಈ ಶಿಬಿರದಲ್ಲಿ ಭಾಗವಹಿಸಿರುವ 7 ದಿನಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಂಡಿದ್ದೀರಿ ಎಂದರು.

ನೀವು ದುಶ್ಚಟಗಳಿಂದ ದೂರವಿರುವ ಕಾರಣ ನಿಮ್ಮ ಮುಖದಲ್ಲಿ ಹೊಸ ತೇಜಸ್ಸು ಬಂದಿದ್ದು, ನಿಮ್ಮ ದೇಹದ ತೂಕ 2 ರಿಂದ 3 ಕೆಜಿ ಹೆಚ್ಚಳವಾಗಿರುವ ವಿಷಯ ತಿಳಿದು ಸಂತೋಷವಾಯಿತು. ಇಲ್ಲಿ ನಿಮಗೆ ಪ್ರತಿನಿತ್ಯ ಕಲಿಸಿರುವ ಒಂದಿಷ್ಟು ಜೀವನದ ಕ್ರಮಗಳನ್ನು ಶನಿವಾರದಿಂದ ಮನೆಯಲ್ಲೂ ಮುಂದುವರೆಸಿದರೆ ನಿಮ್ಮ ಮನೆಯಲ್ಲಿ ಸದಾ ಆನಂದ, ಆರೋಗ್ಯ ನೆಲೆಸಿರುತ್ತದೆ.

ಮನೆಯಲ್ಲಿ ನಿಮ್ಮ ಜವಾಬ್ದಾರಿಗಳನ್ನು ಚನ್ನಾಗಿ ನಿಭಾಯಿಸುವ ಮೂಲಕ ಮನೆಯಲ್ಲಿ ಎಲ್ಲರಿಗೂ ಪ್ರೀತಿಕೊಡುವುದರ ಜೊತೆಗೆ ಎಲ್ಲರ ಪ್ರೀತಿಗೆ ನೀವೂ ಪಾತ್ರರಾಗಿ ಎಂದು ಗೀತಾ ಅವರು ಶಿಬಿರಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಮನಃಪರಿವರ್ತಿಸುವ ಪ್ರಯತ್ನ ಮಾಡಿದರು.

ಗೀತಾ ಅವರ ಮಾತುಗಳಿಗೆ ಮನಸೋತು ಶಿಬಿರಾರ್ಥಿಗಳು ಜೀವನದಲ್ಲಿ ಇನ್ನೆಂದೂ ಕುಡಿಯುವುದಿಲ್ಲ ಎಂಬ ಭರವಸೆ ನೀಡಿದರು.

ಉಪ ತಹಶೀಲ್ದಾರ್‌ ಆರ್. ರವಿ ಮಾತನಾಡಿ, ಸಹವಾಸ ದೋಷದಿಂದ ಅಥವಾ ಶೋಕಿಗಾಗಿ ನೀವು ಕಲಿತಿರುವ ದುಶ್ಚಟಗಳಿಂದ ನಿಮ್ಮ ಬದುಕು ಏನಾಗಿದೆ ಎಂಬ ಅರಿವು ನಿಮಗೆ ಬಂದಿದೆ. ಕುಡಿತ ಬಿಟ್ಟು ಗುಟ್ಕಾ, ತಂಬಾಕು ಹಾಕುವ ರೂಢಿಯನ್ನು ಮಾತ್ರ ಮಾಡಿಕೊಳ್ಳಬೇಡಿ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌ ಮಾತನಾಡಿ, ಧರ್ಮಸ್ಥಳ ಯೋಜನೆ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ನೀವೆಲ್ಲರೂ ಶನಿವಾರದಿಂದ ಮನೆಯಲ್ಲಿ ಹೊಸ ಬೆಳಕಿನ ದೀಪ ಹಚ್ಚಬೇಕು. ಈ ಮೂಲಕ ಹೊಸ ಬದುಕು ಆರಂಭಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿಗಳಿ ಪ್ರಕಾಶ್‌ ಮಾತನಾಡಿ, ಈ ಶಿಬಿರದ ಯಶಸ್ಸಿಗೆ ಸಾಕಷ್ಟು ಜನ ಶ್ರಮ ವಹಿಸಿದ್ದಾರೆ. ಅವರ ಶ್ರಮ ಸಾರ್ಥಕವಾಗಬೇಕೆಂದರೆ ಶಿಬಿರಾರ್ಥಿಗಳು ಜೀವನ ಪೂರ್ತಿ ದುಶ್ಚಟಗಳಿಂದ ದೂರವಿದ್ದು, ಸಮೃದ್ಧಿ ಬದುಕು ರೂಪಿಸಿಕೊಳ್ಳಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.

ಮದ್ಯವರ್ಜನೆ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್‌, ಗ್ರಾ.ಪಂ. ಸದಸ್ಯ ಮಡಿವಾಳರ ಬಸವರಾಜ್, ಮಲೇಬೆನ್ನೂರು ಯೋಜನಾಧಿಕಾರಿ ವಸಂತ್‌ ದೇವಾಡಿಗ, ಶಿಬಿರಾಧಿಕಾರಿ ವಿದ್ಯಾಧರ್‌, ಆರೋಗ್ಯ ಸಹಾಯಕಿ ನೇತ್ರಾವತಿ, ಎಂ.ಎನ್‌. ವಲಯ ಮೇಲ್ವಿಚಾರಕಿ  ಹಾಗೂ ಶಿಬಿರದ ಕಾರ್ಯದರ್ಶಿ ರಕ್ಷಿತಾ, ಜಿಗಳಿ ವಲಯದ ಮೇಲ್ವಿಚಾರಕ ಹರೀಶ್‌, ಜಿಗಳಿ ಒಕ್ಕೂಟದ ಅಧ್ಯಕ್ಷ ಎನ್‌.ಬಸವರಾಜ್‌, ಸೇವಾ ಪ್ರತಿನಿಧಿಗಳಾದ ಶೋಭಾ, ನಾಗರತ್ನ, ಮಮತಾ, ಮಂಜುಳಾ, ಶೃತಿ, ವೀಣಾ, ಪ್ರಿಯಾ, ಕೊಕ್ಕನೂರು ಒಕ್ಕೂಟದ ಅಧ್ಯಕ್ಷ ಹನುಮಂತರಾಯ, ಮಲೇಬೆನ್ನೂರು ಯೋಜನಾಧಿಕಾರಿಗಳ ಕಛೇರಿಯ ಶ್ರೀಕಾಂತ್‌, ರಾಕೇಶ್‌, ಪೂಜಾ, ರೇಷ್ಮಾ, ಶಿಲ್ಪ, ಅನುಷ, ಭವ್ಯ, ಮಂಜುನಾಥ್ ಮತ್ತು ನವಜೀವನ ಸಮಿತಿ ಸದಸ್ಯರು ಈ ವೇಳೆ ಹಾಜರಿದ್ದರು.

error: Content is protected !!