ಹರಪನಹಳ್ಳಿ, ಆ. 17 – ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ಇದೇ ದಿನಾಂಕ 21 ರಿಂದ ಸೆಪ್ಟಂಬರ್ 2ರವರೆಗೆ ಪಟ್ಟಣದ ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಜರುಗಲಿದೆ ಎಂದು ಪ್ರಾಚಾರ್ಯರ ಹೆಚ್.ಮಲ್ಲಿಕಾರ್ಜುನ ತಿಳಿಸಿದರು.
ಪಟ್ಟಣದ ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ 1984 ರಿಂದ ಇಲ್ಲಿಯವರೆಗೆ ಅನುತ್ತೀರ್ಣರಾದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವನ್ನು ಸರ್ಕಾರ ಕಲ್ಪಿಸಿ ಕೊಟ್ಟಿದ್ದು ತಾಲ್ಲೂಕಿನ 18 ಕಾಲೇಜುಗಳಿಂದ ಒಟ್ಟು 1010 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ ಎಂದರು.
18 ಕಾಲೇಜುಗಳ ವಿದ್ಯಾರ್ಥಿಗಳಿಗೆ ಹರಪನಹಳ್ಳಿ ಪಟ್ಟಣದ ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಬರೆಯುವ ಅವಕಾಶ ಕಲ್ಪಿಸಿಕೊಡಲಾಗಿದ್ದು, ಪರೀಕ್ಷೆ ಕೇಂದ್ರಕ್ಕೆ ತಾಲ್ಲೂಕಿನ ವಿದ್ಯಾರ್ಥಿಗಳು ತಮಗೆ ನೀಡಿರುವ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸಬಹುದು. ಪರೀಕ್ಷೆ ಮಧ್ಯಾಹ್ನ 2.15 ರಿಂದ ಆರಂಭವಾಗಿ ಸಾಯಂಕಾಲ 5.30ಕ್ಕೆ ಕೊನೆಗೊಳ್ಳಲಿದೆ. ತಾಲ್ಲೂಕಿನ ಅನುತ್ತೀರ್ಣರಾದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ವೇಳೆ ಉಪನ್ಯಾಸಕರಾದ ಎಸ್.ಚನ್ನಬಸಪ್ಪ, ಬಿ.ಕೃಷಮೂರ್ತಿ, ವ್ಯವಸ್ಥಾಪಕ ಆತ್ಮಾನಂದ ಸೇರಿದಂತೆ, ಇತರರು ಇದ್ದರು.