ಜನತೆ ಕೊಟ್ಟ ಅಧಿಕಾರವನ್ನು ಅಭಿವೃದ್ಧಿಗೆ ಉಪಯೋಗಿಸುವೆ

ಜನತೆ ಕೊಟ್ಟ ಅಧಿಕಾರವನ್ನು ಅಭಿವೃದ್ಧಿಗೆ ಉಪಯೋಗಿಸುವೆ

ಹರಪನಹಳ್ಳಿ, ಆ. 17 – ತಾಲ್ಲೂಕಿನ ಜನತೆ ಕೊಟ್ಟ ಅಧಿಕಾರವನ್ನು ಅಭಿವೃದ್ಧಿಗೆ ಉಪಯೋಗಿ ಸುವೆ ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದಿಂದ  ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಾಂಗ, ಶಾಸಕಾಂಗ ಎರಡು ಮುಖ್ಯವಾಗಿದ್ದು, ಎರಡಕ್ಕೂ ಅನ್ಯಾಯ ಮಾಡಲು ಇಷ್ಟವಿಲ್ಲ ಎಂದ ಅವರು ನನಗೆ ಅಧಿಕಾರ ಕೊಟ್ಟಿದ್ದೀರಿ ಈ ತಾಲ್ಲೂಕಿನ ಜನತೆ ಅಭಿವೃದ್ಧಿಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸುವೆ ಎಂದರು. ಸಾರ್ವಜನಿಕರ ಒಡನಾಟವಿದ್ದಲ್ಲಿ ಮಾತ್ರ ಗೆಲುವು ಸುಲಭವಾಗುತ್ತದೆ. ಸದಾ ಸರ್ಕಾರಿ ನೌಕರರ ಜೊತೆಗಿದ್ದು, ಅವರ ಕಷ್ಟ- ಸುಖಗಳಲ್ಲಿ ಭಾಗಿಯಾಗಿ ಅವರ ಎಲ್ಲಾ ಸಮಸ್ಯೆಗಳಿಗೂ ನಾನು ಸ್ಪಂದಿಸುತ್ತೇನೆ ಎಂದು ಹೇಳಿದರು. ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಪ್ಪನವರ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನಲ್ಲಿ 900 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳಿರುವುದರಿಂದ ನೌಕರರಿಗೆ ಕಾರ್ಯಭಾರ ಹೆಚ್ಚಾಗಿದೆ ಎಂದ ಅವರು ಎನ್.ಪಿ.ಎಸ್.ರದ್ದು ಮಾಡುವ ವಿಚಾರವನ್ನು ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಅವರು ಶಾಸಕರಲ್ಲಿ ಮನವಿ ಮಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ.ಪ್ರಕಾಶ್ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಬೇಕಾದವರಿಗೆ ಮತ ಹಾಕುವುದು ಸಾಮಾನ್ಯ, ಆದರೆ ಚುನಾವಣೆ ನಂತರ ಒಗ್ಗಟ್ಟಾಗಿ ಸಂಘದ ಅಭಿವೃದ್ಧಿಗೆ, ಮಕ್ಕಳ ಅಭಿವೃದ್ಧಿಗೆ ಚಿಂತಿಸಬೇಕಿದೆ ಎಂದು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಎಂ.ಪಿ.ಲತಾ ಇವರಿಗೆ ಚುನಾವಣೆಯಲ್ಲಿ ನೌಕರರ ಕಡೆಯಿಂದ ಹೆಚ್ಚಿನ ಬೆಂಬಲ ಸಿಕ್ಕಿದೆ. ನಮ್ಮ ಶಾಸಕರು ದ್ವೇಷದ ರಾಜಕಾರಣ ಎಂದಿಗೂ ಮಾಡಿಕೊಂಡು ಬಂದಿಲ್ಲ. ಮತ ಹಾಕಿದವರು, ಹಾಕದಿದ್ದವರು ಎಲ್ಲರನ್ನೂ ಒಂದೇ ಕಾಣುತ್ತಾರೆ ಎಂದ ಅವರು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಜಿ.ಪದ್ಮಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕಥೆಗಾರ ಮಂಜುನಾಥ, ಪದಾಧಿಕಾರಿಗಳಾದ ಕುಬೇಂದ್ರನಾಯ್ಕ, ಬಿ.ಎಚ್.ಚಂದ್ರಪ್ಪ, ಸಿದ್ದಲಿಂಗನಗೌಡ, ಗುರುಪ್ರಸಾದ, ಪದ್ಮರಾಜ, ಷರೀಫ, ರಮೇಶ, ಬಿ.ರಾಜಶೇಖರ, ಚಂದ್ರಮೌಳಿ, ಪತ್ತಿನ ಸಂಘದ ಅಧ್ಯಕ್ಷ ಹನುಮಂತನಾಯ್ಕ, ಪುರಸಭಾ ಸದಸ್ಯರಾದ ಗೊಂಗಡಿ ನಾಗರಾಜ, ಲಾಟಿ ದಾದಾಪೀರ್‌, ಉದ್ದಾರ ಗಣೇಶ, ಮಂಜುನಾಥ ಇಜತಕರ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಪ್ಪ ಕಂಚಿಕೇರಿ ಜಯಲಕ್ಷ್ಮಿ, ಸೇರಿದಂತೆ ಇತರರು ಇದ್ದರು.

error: Content is protected !!