ದಾವಣಗೆರೆ, ಆ. 17- ದೆಹಲಿಯಲ್ಲಿ ಹೋರಾಟದಲ್ಲಿ ತೊಡಗಿದ್ದ ಇಪಿಎಸ್-95 ಪಿಂಚಣಿದಾರರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಯನ್ನು ಖಂಡಿಸಿ ನಗರದ ಕೆ.ಬಿ. ಬಡಾವಣೆಯ ಕಾರ್ಮಿಕ ಮಂತ್ರಾಲಯದ ಅಡಿಯಲ್ಲಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ ಜಿಲ್ಲಾ ಕಚೇರಿ ಮುಂದೆ ಜಿಲ್ಲಾ ರಾಷ್ಟ್ರೀಯ ಸಂಘರ್ಷ ಸಮಿತಿ ಇಂದು ಪ್ರತಿಭಟನೆ ನಡೆಸಿತು.
ಹಳೆಯ ಇಪಿಎಸ್-95 ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರ ಮೇಲೆ ದಬ್ಬಾಳಿಕೆ ನಡೆಸಿರುವ ಪೊಲೀಸರ ದೌರ್ಜನ್ಯ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಮರುಳಸಿದ್ಧಯ್ಯ ಅವರು, ದೇಶದ ಕೈಗಾರಿಕಾ, ಸಾರ್ವಜನಿಕ, ಸಹಕಾರಿ, ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸಿದ 70 ಲಕ್ಷ ನಿವೃತ್ತ ನೌಕರರು ಅಂದರೆ ಇಪಿಎಸ್ 95 ಪಿಂಚಣಿದಾರ ಅತ್ಯಲ್ಪ ಪಿಂಚಣಿ ಪಡೆಯುತ್ತಿದ್ದಾರೆ. ನಮ್ಮ ಬೆವರಿನ ಹನಿಯ ಹಣವನ್ನು ಕೊಡಲು ಭವಿಷ್ಯ ನಿಧಿ ಕಚೇರಿಯ ಅಧಿಕಾರಿಗಳು ನಮಗೆ ಸೇರಬೇಕಾದ ಪಿಂಚಣಿ ನೀಡುತ್ತಿಲ್ಲ ಎಂದರು.
ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಇಪಿಎಸ್-95 ಪಿಂಚಣಿದಾರರ ಬೇಡಿಕೆಗಳು ಈಡೇರುತ್ತಿಲ್ಲ. ಈ ಕುರಿತು ದೇಶದ ಪ್ರಧಾನ ಮಂತ್ರಿ, ಕಾರ್ಮಿಕ ಮಂತ್ರಾಲಯ ಸೇರಿದಂತೆ, ಕೇಂದ್ರ ಸರ್ಕಾರದ ಹಲವು ಅಧಿಕಾರಿಗಳು ಗಮನಹರಿಬೇಕೆಂದು ಒತ್ತಾಯಿಸಿದರು.
ಪತ್ರಿಭಟನೆಯಲ್ಲಿ ಟಿ. ಮಂಜುನಾಥ್, ಗಂಗಾಧರ, ಮಲ್ಲಿಕಾರ್ಜುನ ತಂಗಡಗಿ, ಕೆ. ವಿರೂಪಾಕ್ಷಪ್ಪ, ದತ್ತಪ್ಪ ಶೆಟ್ಟರ್, ಎ.ಬಿ. ಸಿದ್ಧಲಿಂಗಯ್ಯ, ಪಿ.ನಿಜಗುಣ, ಚಂದ್ರಪ್ಪ, ಸೋಮಶೇಖರ್, ಎಂ.ಬಸವರಾಜ್, ಮಹೇಶ್ವರಪ್ಪ, ಪ್ರಭಾಕರ, ಮಂಜುನಾಥ್ ಮತ್ತಿತರರಿದ್ದರು.