ಭಾರತ ಅನೇಕತೆಯಲ್ಲಿ ಏಕತೆ ಕಾಣುವ ದೇಶ : ದೇವೇಂದ್ರಪ್ಪ

ಭಾರತ ಅನೇಕತೆಯಲ್ಲಿ ಏಕತೆ ಕಾಣುವ ದೇಶ : ದೇವೇಂದ್ರಪ್ಪ

ಜಗಳೂರಿನಲ್ಲಿ 77ನೇ ಸ್ವಾತಂತ್ರ್ಯೋತ್ಸವ

ಜಗಳೂರು, ಆ.15- ಭಾರತ ಅನೇಕತೆಯಲ್ಲಿ ಏಕತೆ ಕಾಣುವ ದೇಶ. ಸರ್ವಜನಾಂಗದ ಶಾಂತಿಯ ತೋಟವಾಗಿ ದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ  ರಾಷ್ಟ್ರೀಯ ಹಬ್ಬಗಳ‌ ಆಚರಣಾ ಸಮಿತಿಯಿಂದ‌ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜಾತಿ, ಧರ್ಮ, ಆಹಾರದಲ್ಲಿ ಇರುವ ವಿಭಿನ್ನತೆಯನ್ನು ಬೇರಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ವೈವಿಧ್ಯತೆಯಲ್ಲಿ ಏಕತೆ ಉಳಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಶಾಸಕರು ಕರೆ ನೀಡಿದರು.

ದೇಶಕ್ಕೆ ಮಹಾತ್ಮಗಾಂಧೀಜಿಯ ಅಹಿಂಸಾ ಮಾರ್ಗದ ಜೊತೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್‌ರಂತಹ ಮಹಾನ್ ಕ್ರಾಂತಿ ಕಾರಿಗಳ ಪ್ರಾಣತ್ಯಾಗದಿಂದ ಹಾಗೂ ಅನೇಕ ವೀರಮಾತೆಯರ ಬಸಿರು ಬರಿದಾದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ.  ದೇಶ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿದೆ ಎಂದರು.

ಗಾಂಧೀಜಿಯವರು ದೇಶ ಬ್ರಿಟೀಷರ ಸಂಕೋಲೆ ಯಿಂದ ಮುಕ್ತಿಯಾಗುವವರೆಗೆ ಮೈತುಂಬಾ ಬಟ್ಟೆ ಧರಿಸಲಿಲ್ಲ. ಸ್ವಾತಂತ್ರ್ಯ ದೊರೆತ ನಂತರ ಸಂತೋಷದಿಂದ  ಮೈತುಂಬಾ ಬಟ್ಟೆ ಧರಿಸಿದಾಗ ಗೂಡ್ಸೆ ಹಂತಕನಿಗೆ ಬಲಿಯಾದರು ಎಂದು ಬೇಸರ ವ್ಯಕ್ತಪಡಿಸಿದರು.

ನಾನೊಬ್ಬ ಸೇವಕ, ಶಾಸಕನಲ್ಲ: ಕ್ಷೇತ್ರದಲ್ಲಿ ನಮಿಸುವ ಕೈಗಳು ನನ್ನದಲ್ಲ. ಜನರ ಕಷ್ಟಗಳಿಗೆ ಮಿಡಿಯುವ ಹೃದಯ ನನ್ನದು. ನಾನು ಶಾಸಕನಲ್ಲ ನಾನೊಬ್ಬ ಜನಸೇವಕ ಎಂದು ತಿಳಿಸಿದರು. 4 ದಶಕಗಳ ಹಿಂದೆ ನಾನೊಬ್ಬ ವಿದ್ಯಾರ್ಥಿ ಯಾಗಿ ಇದೇ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಇದೀಗ ಶಾಸಕನಾಗಿ ಮಾತನಾಡುತ್ತಿರುವುದು ಹರ್ಷತಂದಿದೆ ಎಂದರು. 

ಜನ್ಮ ಕೊಟ್ಟ ತಾಯಿಯ ಜೊತೆ ಜನ್ಮತಾಳಿದ ನಾಡಿಗೆ ಗೌರವ ಸಲ್ಲಿಸಬೇಕು. ಇಂದಿನ ಸಂಭ್ರಮದಲ್ಲಿ ದೇಶಭಕ್ತಿ ಸಾರುವ ರೂಪಕಗಳ ನೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಭವಿಷ್ಯದಲ್ಲಿ ದೇಶಕ್ಕೆ ಉತ್ತಮ ರಾಜಕಾರಣಿಗಳು, ಅಧಿಕಾರಿಗಳಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.

ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎನ್.ಟಿ.ಎರ್ರಿಸ್ವಾಮಿ ಉಪನ್ಯಾಸ ನೀಡುತ್ತಾ, ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಾಗಿ ಆಚರಿಸಬೇಕು. ಕುವೆಂಪು ಅವರ ಆಶಯಗಳು ಮನೆಮಾತಾಗಬೇಕು. ವರ್ಷಗಳು ಕಳೆದಂತೆ ಸ್ವಾತಂತ್ರ ದಿನಾಚರಣೆ ಸಂಭ್ರಮ ಕಳೆಗುಂದುದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, 76 ಮೀಟರ್ ಉದ್ದದ ರಾಷ್ಟ ಧ್ವಜದೊಂದಿಗೆ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕೆಲ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.

ತಹಶೀಲ್ದಾರ್ ಎ.ಎಸ್  ಅರುಣ ಕಾರಗಿ  ಧ್ವಜಾ ರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶ ನೀಡಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಧ್ವಜ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಇಓ ಚಂದ್ರಶೇಖರ್, ಪ್ರಭಾರಿ ಬಿಇಓ ಸುರೇಶ್ ರೆಡ್ಡಿ, ಪ.ಪಂ‌.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ, ತಿಪ್ಪೇಸ್ವಾಮಿ, ರವಿಕುಮಾರ್, ವಿಶಾಲಾಕ್ಷಿ, ನಿರ್ಮಲ ಕುಮಾರಿ, ನಜರ್ ಉನ್ನೀಸಾ, ನವೀನ್ ಕುಮಾರ್, ಲುಕ್ಮಾನ್ ಖಾನ್, ದೇವರಾಜ್, ಪಾಪಲಿಂಗಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ನೌಕರರ ಸಂಘದ  ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ  ಸಣ್ಣಸೂರಜ್ಜ, ಎನ್.ಎಂ.ಹಾಲಸ್ವಾಮಿ, ಹುಸೇನ್ ಮಿಯ್ಯಾ,  ಕೆ.ಪಿ.ಪಾಲಯ್ಯ, ಕಲ್ಲೇಶ್ ರಾಜ್ ಪಟೇಲ್, ಷಂಷೀರ್ ಅಹಮ್ಮದ್ ಹಾಗೂ ವಿವಿಧ ಇಲಾಖೆ ಗಳ  ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!