ದುಶ್ಚಟಗಳಿಂದ ನಿಮಗೆ ಅಷ್ಟೇ ಅಲ್ಲ, ನಿಮ್ಮ ಕುಟುಂಬದವರಿಗೂ ಕಷ್ಟ

ದುಶ್ಚಟಗಳಿಂದ ನಿಮಗೆ ಅಷ್ಟೇ ಅಲ್ಲ, ನಿಮ್ಮ ಕುಟುಂಬದವರಿಗೂ ಕಷ್ಟ

ಕೊಮಾರನಹಳ್ಳಿ : ಮದ್ಯವರ್ಜನೆ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಡಾ. ಶ್ರೀನಿವಾಸ್‌ ಎಚ್ಚರಿಕೆ

ಮಲೇಬೆನ್ನೂರು, ಆ. 15 – ಕಷ್ಟ ಪಟ್ಟು ದುಡಿಯುವ ಜನರು ದುಡಿದ ಹಣವನ್ನು ದುಶ್ಚಟಗಳಿಗೆ ಖರ್ಚು ಮಾಡಿ ಖಾಲಿ ಕೈಯಿಂದ ಮನೆಗೆ ಹೋದರೆ ಹೆಂಡತಿ-ಮಕ್ಕಳ ಮತ್ತು ತಂದೆ-ತಾಯಿಗಳನ್ನು ಯಾರು ನೋಡಿಕೊಳ್ಳಬೇಕೆಂದು ಮಕ್ಕಳ ತಜ್ಞ ಡಾ. ಶ್ರೀನಿವಾಸ್‌ ಶಿಬಿರಾರ್ಥಿಗಳನ್ನು ಪ್ರಶ್ನಿಸಿದರು.

ಅವರು ಸೋಮವಾರ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ 1705ನೇ ಮದ್ಯವರ್ಜನೆ ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದುಶ್ಚಟಗಳಿಗೆ ಒಳಾಗದವರು ಅದರಿಂದ ಹೊರಬರದಿದ್ದರೆ, ಮುಂದೆ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಡಾ. ಶ್ರೀನಿವಾಸ್‌ ಅವರು, ಈ ಶಿಬಿರದಲ್ಲಿರುವ ಶಿಬಿರಾರ್ಥಿಗಳು ಶಿಬಿರದ ನಂತರ ದುಶ್ಚಟಗಳಿಂದ ದೂರವಿದ್ದರೆ ಅಂತಹ ವ್ಯಕ್ತಿಗಳನ್ನು ಕರೆದು ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.

ಸಿರಿಧಾನ್ಯ ತಜ್ಞ ಹಾಗೂ ಬರಹಗಾರ ಕಣಜನಹಳ್ಳಿ ನಾಗರಾಜಪ್ಪ ಮಾತನಾಡಿ, ಯಾವುದೇ ವ್ಯಸನಕ್ಕೆ ಮನುಷ್ಯ ಅಡಿಯಾಳಾಗುವುದು ಅವನಲ್ಲಿರುವ ಮಾನಸಿಕ ದೌರ್ಬಲ್ಯದಿಂದ ಎಂದರು.

ಹದಿಹರೆಯದವರು ಮೋಜಿಗಾಗಿ ಮತ್ತು ಸಾಹಸಿ ಎಂದು ತೋರಿಸಿಕೊಳ್ಳಲು ಅಥವಾ ಸಹವಾಸ ದೋಷದಿಂದ ಪ್ರಾರಂಭವಾಗುವ ದುಶ್ಚಟಗಳು ನಂತರ ಅವನ ಜೀವನವನ್ನೇ ತಿಂದು ಬಿಡುತ್ತವೆ.

ಅಲ್ಲದೇ, ದುಶ್ಚಟಗಳು ಸಮಾಜಘಾತುಕ ಕೆಲಸಗಳಿಗೂ ಪ್ರೇರೇಪಣೆ ನೀಡುತ್ತೇವೆ, ಹಾಗಾಗಿ ನೀವು ಈ ದುಶ್ಚಟಗಳೆಂಬ ಬಂಧನದಿಂದ ಹೊರ ಬಂದು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ನಾಗರಾಜಪ್ಪ ಮನವಿ ಮಾಡಿದರು.

ಜಿಲ್ಲಾ ಕಸಾಪ ಗೌ. ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಮತ್ತು ಮಲೇಬೆನ್ನೂರು ಹೋಬಳಿ ಕಸಾಪ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ ಅವರು ಈಗ ಉತ್ತಮ ಪರಿಸರಕ್ಕೆ ಬಂದಿರುವ ನೀವು ಮುಂದೆ ಸಮೃದ್ಧಿ ಬದುಕು ರೂಢಿಸಿ ಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಧರ್ಮಸ್ಥಳ ಯೋಜನೆಯ ಎಂ.ಎಸ್‌. ಯೋಜನಾಧಿಕಾರಿ ಶ್ರೀಧರ್‌, ಶಿಬಿರಾಧಿಕಾರಿ ವಿದ್ಯಾಧರ್‌ ಮಾತನಾಡಿದರು. ಮದ್ಯವರ್ಜನೆ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್‌ ಪಟೇಲ್‌, ಜನ ಜಾಗೃತಿ ವೇದಿಕೆ ಸದಸ್ಯ ಜಿಗಳಿ ಪ್ರಕಾಶ್‌, ಸಿರಿಧಾನ್ಯ ಮೇಲ್ವಿಚಾರಕ ಸಂತೋಷ್‌, ಎಂ.ಎನ್‌. ಹಳ್ಳಿ ವಲಯ ಮೇಲ್ವಿಚಾರಕಿ ರಕ್ಷಿತಾ, ಪ್ರಗತಿ ಪರ ರೈತ ನಿರಂಜನ್‌ ಪಾಟೀಲ್‌, ಕೊಕ್ಕನೂರು ಒಕ್ಕೂಟದ ಅಧ್ಯಕ್ಷ ಹನುಮಂತರಾಯ, ಗ್ರಾ.ಪಂ. ಸದಸ್ಯ ಮಡಿವಾಳರ ಬಸವರಾಜ್ ಭಾಗಾವಹಿಸಿದ್ದರು.

error: Content is protected !!