ಪಿಯುಸಿ ಹಂತ ಬದುಕಿನ ಮಹತ್ವದ ಘಟ್ಟ

ಪಿಯುಸಿ ಹಂತ ಬದುಕಿನ ಮಹತ್ವದ ಘಟ್ಟ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಶ್ರೀ ಮಳೆ ಶಿವಯೋಗೀಶ್ವರ ಸ್ವಾಮೀಜಿ

ಹರಪನಹಳ್ಳಿ, ಆ.15- ಪಿಯುಸಿ ಹಂತ ಬದುಕಿನ ಮಹತ್ವದ ಘಟ್ಟವಾಗಿದೆ. ಈ ಹಂತವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ದೇಶಭಕ್ತಿಯನ್ನು ಮೇಳೈಸಿಕೊಳ್ಳಬೇಕು ಎಂದು ಹಿರೇಹಡಗಲಿಯ ಮಾನಿಹಳ್ಳಿ ಪುರವರ್ಗ ಮಠ, ಜ್ಞಾನ ಗುರು ವಿದ್ಯಾಪೀಠದ ನಿರ್ದೇಶಕರಾದ ಶ್ರೀ ಮಳೆ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ತಾರುಣ್ಯ ಹಂತದಲ್ಲಿರುವ ವಿದ್ಯಾರ್ಥಿಗಳು ಈ ಹಂತವನ್ನು ಸಮರ್ಥವಾಗಿ ನಿರ್ವಹಿಸಬೇಕು. ಕೇವಲ ಕಂಠಪಾಠ ಮಾಡಿ ಮಾತನಾಡಿದರೆ ಸಾಲದು. ನಮ್ಮ ಮಾತಿನಲ್ಲಿ ದೇಶಭಕ್ತಿ, ನಾಡಿನ ಭಕ್ತಿ, ಸಮಾಜದ ಒಳಿತು ಅಭಿಮಾನದ ಕಿಚ್ಚು ಒಡಮೂಡಿ ಬರಬೇಕು. ಪಿಯುಸಿ ಬದುಕಿಗೆ ತಿರುವನ್ನು ನೀಡುವಂತಹುದು. ಹುಟ್ಟಿದ ಮೇಲೆ ಈ ದೇಶಕ್ಕೆ ಏನಾದರೊಂದು ಸಾಧನೆ ಮಾಡಿ ಆ ರೀತಿ ಒಂದು ದೃಢ ಸಂಕಲ್ಪ ಮಾಡಬೇಕು. ಪ್ರಾಚಾರ್ಯ ಹೆಚ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಾಲೇಜು ಸಾಕಷ್ಟು ಬದಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದರು.

ಪುರಸಭಾ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಪುಷ್ಪಾ ದಿವಾಕರ್, ವಿಜಯ ದಿವಾಕರ್ ಇವರು ದಿ.ದಿವಾಕರ್ ವಕೀಲರ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಲು 50 ಸಾವಿರ ರೂ.  ದತ್ತಿನಿಧಿ ಸ್ಥಾಪಿಸಿ, ಚೆಕ್ ನೀಡಿ ಅದರಿಂದ ಬರುವಂತಹ ಬಡ್ಡಿ ಹಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಬಹುಮಾನ ನೀಡಲು ತಿಳಿಸಿದರು. 

ಪ್ರಾಚಾರ್ಯ ಹೆಚ್.ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಿ ಮಾತನಾಡಿ,  ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು.  ಯೋಧರು ಮಳೆ, ಚಳಿ, ಗಾಳಿ ಎನ್ನದೇ ದೇಶದ ರಕ್ಷಣೆಯಲ್ಲಿ ತೊಡಗಿದ್ದಾರೆ. ಕೊನೆ ಪಕ್ಷ ದೇಶದ ಬಗ್ಗೆ ಅಭಿಮಾನ, ಘನತೆ, ಗೌರವವಿರಬೇಕು. ಮಹಾತ್ಮರ ತತ್ವ , ಆದರ್ಶಗಳನ್ನು ಪಾಲಿಸಬೇಕು. ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ಶ್ರೀಮತಿ ಪುಷ್ಪಾ ದಿವಾಕರ್ ಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಉಪನ್ಯಾಸಕರಾದ ಹೆಚ್.ಬಿ ಸೋಮರೆಡ್ಡಿ, ಎಸ್. ಚನ್ನಬಸಪ್ಪ, ಬಿ.ಕೃಷ್ಣಮೂರ್ತಿ, ಎಸ್.ಕೊಟ್ರಪ್ಪ, ಟಿ.ಎಂ. ಜಯದೀಪ, ಸಿ.ಎಂ.ಕೊಟ್ರಯ್ಯ ಸೇರಿದಂತೆ, ಇತರರು ಇದ್ದರು.

error: Content is protected !!