ಪಂಪ್‌ಸೆಟ್‌ಗಳಿಗೆ ಶಿಫ್ಟ್‌ನಲ್ಲಿ ವಿದ್ಯುತ್ ಪೂರೈಕೆಗೆ ರೈತರ ಆಗ್ರಹ

ಪಂಪ್‌ಸೆಟ್‌ಗಳಿಗೆ ಶಿಫ್ಟ್‌ನಲ್ಲಿ ವಿದ್ಯುತ್ ಪೂರೈಕೆಗೆ ರೈತರ ಆಗ್ರಹ

ದಾವಣಗೆರೆ, ಆ.15- ತಾಲ್ಲೂಕಿನ ಕುಕ್ಕುವಾಡ ವಿದ್ಯುತ್ ವಿತರಣಾ ಉಪಕೇಂದ್ರದಿಂದ ರೈತರ ಪಂಪ್‌ಸೆಟ್‌ಗಳಿಗೆ ಶಿಫ್ಟ್‌ನಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅವರನ್ನು ರೈತರ  ಒಕ್ಕೂಟ ಒತ್ತಾಯಿಸಿದೆ.

ಸದ್ಯ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಶ್ಯಾಗಲೆ ಹಳ್ಳದ ದಡದಲ್ಲಿ ಅಳವಡಿಸಿರುವ ಲೋಕಿಕೆರೆ, ಗಿರಿಯಾಪುರ, ಹೊನ್ನಮರಡಿ, ಮತ್ತಿ, ಕುಕ್ಕುವಾಡ, ಕೊಳೇನಹಳ್ಳಿ ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ಪಂಪ್‌ಸೆಟ್ ಮೋಟಾರ್‌ಗಳು ಏಕ ಕಾಲದಲ್ಲಿ ಪ್ರಾರಂಭವಾಗುವುದರಿಂದ ಹಳ್ಳದಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಇದರಿಂದ ಹಳ್ಳದಲ್ಲಿ ನೀರಿದ್ದರೂ ಜಮೀನಿಗೆ ಹರಿಸಲು  ನೀರಿಲ್ಲದಂತೆ ಆಗಿದೆ. ಆದ್ದರಿಂದ ಭತ್ತದ ನಾಟಿ ಮಾಡುತ್ತಿರುವ ರೈತರು ಕಂಗಾಲಾಗಿದ್ದಾರೆ.

ಈ ಹಿಂದೆ ಮೂರು ವಿದ್ಯುತ್ ಮಾರ್ಗಗಳ ಮೂಲಕ ಹಳ್ಳಿಗಳನ್ನು ಮೂರು ಬ್ಯಾಚ್ ಗಳನ್ನಾಗಿ ಮಾಡಿ, ಹಗಲು-ರಾತ್ರಿ ಮೂರು ಪಾಳಿಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆಗ ನೀರು ಲಭ್ಯವಾಗುತ್ತಿತ್ತು. ಈಗ ಒಂದೇ ಪಾಳಿಯಲ್ಲಿ ವಿದ್ಯುತ್ ಪೂರೈಕೆ ಮಾಡುವುದರಿಂದ ಏಕಕಾಲಕ್ಕೆ ಎಲ್ಲಾ ಮೋಟಾರ್‌ಗಳು ಪ್ರಾರಂಭವಾಗುವುದರಿಂದ ಕೇವಲ ಅರ್ಧ ಮುಕ್ಕಾಲು ಗಂಟೆಯಲ್ಲಿ ಹಳ್ಳದಲ್ಲಿ ನೀರು ಖಾಲಿಯಾಗಿ ಮೋಟಾರ್‌ಗಳು ನಿಂತು ಹೋಗುತ್ತವೆ. ಆದ್ದರಿಂದ ಜಮೀನುಗಳಿಗೆ ನೀರು ಹರಿಸುವುದು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಪೂರೈಕೆ ಇದ್ದರೂ ಉಪಯೋಗವಾಗುತ್ತಿಲ್ಲ ಮತ್ತು ನಿತ್ಯ ಸಂಜೆ 4 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಹಳ್ಳದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ  ಕೊಳೇನಹಳ್ಳಿ ಬಿ.ಎಂ ಸತೀಶ್ ರೈತರಿಗೆ ಯಾವುದೇ ಗ್ಯಾರಂಟಿ ಇಲ್ಲ ವಾಗಿದೆ. ರಾಜ್ಯದ ಜನತೆ ಕೇಳದಿದ್ದರೂ ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಗ್ಯಾ ರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಆಗಸ್ಟ್ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಜಾರಿ ಗೊಳಿಸಿದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಭತ್ತದ ಬೆಳೆಗೆ ರೈತರಿಂದ ನೀರುಣಿ ಸಲಾಗುತ್ತಿಲ್ಲ. ಇದರಿಂದ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಸೋಲ ಮಾಡಿ ಭತ್ತ ಬೆಳೆದು, ಮಾನವ ಕುಲಕ್ಕೆ ಅನ್ನ ನೀಡುವ ಅನ್ನದಾತ ರೈತನಿಗೆ ಯಾವುದೇ ಗ್ಯಾರಂಟಿ ಇಲ್ಲ. ಆತ್ಮಹತ್ಯೆಯೇ ಗ್ಯಾರಂಟಿಯಾಗಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಮನವಿ ಸ್ವೀಕರಿಸಿದ ಬೆಸ್ಕಾಂ ಕಾರ್ಯಪಾಲಕ ಎಂಜಿ ನಿಯರ್ ಎಸ್. ಕೆ. ಪಾಟೀಲ್, ರೈತರಿಗೆ ಅನುಕೂಲ ವಾಗುವ ರೀತಿಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈ ಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು

ಬಿಜೆಪಿ ಮುಖಂಡ   ಬಿ. ಎಂ. ಸತೀಶ್ ನೇತೃತ್ವದ ನಿಯೋಗದಲ್ಲಿ ಕೊಳೇನಹಳ್ಳಿ ಕೆ. ಶರಣಪ್ಪ, ಕೆ. ಓಂಕಾರಪ್ಪ, ಎಸ್. ಸಿ. ಸಿದ್ದಪ್ಪ, ದೊಡ್ಮನೆ ಹಾಲಸಿದ್ದಪ್ಪ, ಕೆ. ಜಿ. ನಾಗರಾಜ, ಕೆ. ಬಿ. ರವಿಕುಮಾರ್‌, ಕೆ. ಆರ್. ಶಿವು ಮತ್ತಿತರರು ಇದ್ದರು

error: Content is protected !!