ಹಣ ಗಳಿಕೆಗಾಗಿ ಆರೋಗ್ಯ ನಿರ್ಲಕ್ಷ್ಯ ಸಲ್ಲದು : ರಂಭಾಪುರಿ ಶ್ರೀ

ಹಣ ಗಳಿಕೆಗಾಗಿ ಆರೋಗ್ಯ ನಿರ್ಲಕ್ಷ್ಯ ಸಲ್ಲದು : ರಂಭಾಪುರಿ ಶ್ರೀ

ದಾವಣಗೆರೆ, ಆ.12- ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಆಹಾರ, ಆರೋಗ್ಯ ಮತ್ತು ಅಧ್ಯಾತ್ಮ ಮಾನವನ ಸುಖ ಜೀವನಕ್ಕೆ ಮುಖ್ಯವೆಂದು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಪ್ರತಿಪಾದಿಸಿದರು.

ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನ ಜಾಗೃತಿ ಧರ್ಮ ಸಮಾವೇಶದ 4ನೇ ದಿನವಾದ ಇಂದಿನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

 ಮನುಷ್ಯನಿಗೆ ಸಂಪತ್ತು ಗಳಿಸಲು, ಉಳಿಸಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಸಮಯ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯ ಯಾವಾಗಲೂ ಆದರ್ಶವಾಗಿ ಬದುಕಬೇಕಾದರೆ ತಿನ್ನುವ ಅನ್ನದಲ್ಲಿ ಆರೋಗ್ಯ ಅಡಗಿದೆ. ಹಣ ಗಳಿಕೆಗಾಗಿ ಆರೋಗ್ಯ ನಿರ್ಲಕ್ಷಿಸುತ್ತಾನೆ. ಆದರೆ ಕಳೆದುಹೋದ ಆರೋಗ್ಯ ಮತ್ತೆಂದೂ ಬಾರದು. ಶಾಂತಿ, ನೆಮ್ಮದಿಯ ಬದುಕಿಗೆ ಅಧ್ಯಾತ್ಮ ಜ್ಞಾನ ಅವಶ್ಯಕವಾಗಿದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತವಾಗಿರುತ್ತವೆ. ಬಿತ್ತಿದ ಬೀಜದಂತೆ ಫಸಲು. ಹಾಗೆಯೇ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿಯಾಗುತ್ತದೆ. ಜೀವನ ಮೌಲ್ಯಗಳು ಅಂತ್ಯಗೊಂಡರೆ ಅದರೊಂದಿಗೆ ಮಾನವತೆಯೂ ಅಂತ್ಯಗೊಳ್ಳುತ್ತದೆ ಎಂಬುದನ್ನು ನೆನಪಿಡಬೇಕಾಗುತ್ತದೆ ಎಂದು ಹೇಳಿದರು.

ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂಮಿಯ ವ್ಯಾಸ ಇದ್ದಷ್ಟೇ ಇದೆ. ಆದರೆ ಮನುಷ್ಯನ ಹವ್ಯಾಸಗಳು ಹೆಚ್ಚು ಬೆಳೆಯುತ್ತಿವೆ. ಬುದ್ಧಿ ವಿಕಾಸಗೊಂಡಷ್ಟು ಭಾವನೆಗಳು ವಿಕಾಸಗೊಳ್ಳದಿರುವುದೇ ಇಂದಿನ ಎಲ್ಲ ಸಂಘರ್ಷಗಳಿಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉನ್ನತ ಗುರಿ ಮತ್ತು ಗುರುವಿನಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದರು. ಚನ್ನಗಿರಿ ಹಿರೇಮಠದ ಶ್ರೀ ಕೇದಾರ ಶಿವಶಾಂತವೀರ ಶಿವಾಚಾರ್ಯರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ವಿ.ಜೆ. ಇವರಿಗೆ ‘ವೈದ್ಯ ರತ್ನಾಕರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮಲ್ಲಿಕಾರ್ಜುನ್, ಪ್ರಶಸ್ತಿಯು ಜವಾಬ್ದಾರಿ ಹೆಚ್ಚಿಸುತ್ತದೆ. ಅಲ್ಲದೇ ಹೆಚ್ಚಿನ ಸೇವೆಗೆ ಹುಮ್ಮಸ್ಸು ನೀಡುತ್ತದೆ ಎಂದರು.

ಆರೋಗ್ಯವೇ ಭಾಗ್ಯ. ಒಮ್ಮೆ ಆರೋಗ್ಯ ಕಳೆದುಕೊಂಡರೆ ಮತ್ತೆ ಸಿಗವುದಿಲ್ಲ. ಈ ಹಿನ್ನೆಲೆ ಯಲ್ಲಿ ಎಲ್ಲರೂ ನಿಯಮಿತ ಆಹಾರ ಅಭ್ಯಾಸ, ನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ಮೈಗೂಡಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ಭಾರತೀಯರು ವಸುದೈವ ಕುಟುಂಬಕಂ ಕಲ್ಪನೆಯಲ್ಲಿ ಜೀವಿಸುತ್ತಾರೆ. `ವಿಶ್ವವೇ ಒಂದು ಮನೆಯಾದರೆ ಭಾರತ ದೇವರ ಮನೆ ಇದ್ದಂತೆ’ ಎಂದು ವಿದೇಶಿ ಚಿಂತಕರೊಬ್ಬರು ಹೇಳಿದ್ದರು. ಆದರೆ ಇಂದಿನ ಯುವ ಪೀಳಿಗೆ ಆ ದೇವರ ಮನೆಯ ಗೌರವ ಉಳಿಸಿಕೊಂಡು ಬರುತ್ತಿದ್ದಾರೆಯೇ ? ಎಂದು ಚಿಂತಿಸಬೇಕಿದೆ ಎಂದರು.

ಇಂಗ್ಲೆಂಡ್ ದೇಶದವರಿಗೆ ವ್ಯಾಪಾರ, ಫ್ರಾನ್ಸ್‌ನವರಿಗೆ ರಾಜಕಾರಣ, ಜಪಾನ್ ದೇಶದವರಿಗೆ ಲಲಿತಲಾ ಉಪಾಸನೆ ಮಹತ್ವದ್ದಾದರೆ ಭಾರತೀಯರಿಗೆ ಅಧ್ಯಾತ್ಮ ಬಹು ಮುಖ್ಯ. ಆದರೆ ಯುವ ಪೀಳಿಗೆ ಅಧ್ಯಾತ್ಮದಿಂದ ದೂರ ಸರಿಯಲು ಕಾರಣ ಇಂದಿನ ಶಿಕ್ಷಣ ಪದ್ಥತಿ ಎಂದು  ಹೇಳಿದರು.

ಹಿರಿಯರ ಜೀವನ, ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ಕೀಳರಿಮೆ ಹುಟ್ಟಿಸುವಂತಹ ಪಾಶ್ಚಾತ್ಯ ಶಿಕ್ಷಣವನ್ನು ಇಂದಿನ ಮಕ್ಕಳಿಗೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯ ಅರಿತು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದರು.

ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಸಮಾರಂಭವು ಮೈಸೂರು ಅರಮನೆ ಉತ್ಸವವನ್ನು ನೆನಪಿಸುತ್ತಿದೆ. ದೇವರ ಮನೆ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿದೆ ಎಂದು ಶ್ಲ್ಯಾಘಿಸಿದರು.

ವೀರಶೈವ ಕ್ರೆಡಿಟ್ ಕೋ.ಆಪ್ ಸೊಸೈಟಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಉದ್ಯಮಿ ಬಸವರಾಜಪ್ಪ, ವಿಶ್ವಕರ್ಮ ಕೋ – ಆಪ್. ಸೊಸೈಟಿ ಅಧ್ಯಕ್ಷ ಬಿ.ವಿ. ಶಿವಾನಂದ, ವರ್ತಕ ಎಸ್.ಹೆಚ್. ಚಂದ್ರಶೇಖರಯ್ಯ, ಬಿ.ಎಸ್. ವೀರೇಶ್, ವೇ.ಮಹಾರುದ್ರಯ್ಯ, ಎನ್.ಎಂ. ತಿಪ್ಪೇಸ್ವಾಮಿ, ಪಾಲಿಕೆ ಗುತ್ತಿಗೆದಾರ ಟಿ.ರಮೇಶ್ ಇತರರು ಗುರು ರಕ್ಷೆ ಪಡೆದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಹರಿಹರದ ಕಾಂತರಾಜ ಮತ್ತು ವೀರೇಶ ಬಡಿಗೇರ ಇವರಿಂದ ಸಂಗೀತ ಜರುಗಿತು. ಕೊ.ರುದ್ರಯ್ಯ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಕೆ.ಬಿ.ನಾಗರಾಜ್ ಸ್ವಾಗತಿಸಿದರು. ಶಿವಯೋಗಿ ನಿರೂಪಿಸಿದರು.

error: Content is protected !!