ಪರಿಸರ ಸ್ವಚ್ಛತೆ ಜನಜಾಗೃತಿ ಆಂದೋಲನವಾಗಬೇಕು

ಪರಿಸರ ಸ್ವಚ್ಛತೆ ಜನಜಾಗೃತಿ ಆಂದೋಲನವಾಗಬೇಕು

ಜಗಳೂರು ಶಾಸಕ ದೇವೇಂದ್ರಪ್ಪ ಅಭಿಮತ

ಜಗಳೂರು, ಆ.13- ಪರಿಸರ ಸ್ವಚ್ಛತೆಯ ಜಾಗೃತಿ ಮೂಡಿಸುವ  ಕಾರ್ಯಕ್ರಮಗಳು ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಜನಜಾಗೃತಿ ಆಂದೋಲನವಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ `ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ’ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯನ ಆರೋಗ್ಯ ರಕ್ಷಣೆಗೆ‌ ಪರಿಸರ ಸ್ವಚ್ಛತೆ ಅತ್ಯವಶ್ಯಕ. ವೃಕ್ಷ ರಕ್ಷಿತೋ ರಕ್ಷಿತಃ. ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಸ್ತುತವಾಗಿ ಪ್ರತಿಯೊಬ್ಬರೂ ಪ್ರಕೃತಿ ಆರಾಧಕರಾಗಬೇಕಿದೆ. ಸನಾತನ ಶಿಲಾಯುಗದಲ್ಲಿ ಪ್ರಕೃತಿ ಆರಾಧಕರಾಗಿದ್ದುಕೊಂಡು ಉತ್ತಮ ಆರೋಗ್ಯ, ಸಂಪತ್ತು ಗಳಿಸಿ ಶತಾಯುಷಿಗಳಾಗಿದ್ದರು. ಆದರೆ ಇಂದು ದೇಶದಲ್ಲಿ ಜನಸಂಖ್ಯೆ ಹೆಚ್ಚಳ ದಿನದಿಂದ ಪ್ರಕೃತಿ ಸಂಪತ್ತು ವಿನಾಶದತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಅರಿತುಕೊಂಡಿದ್ದನ್ನು ದೇಶದ ಜನತೆ ಮರೆಯಬಾರದು ಎಂದರು.

ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಸ್ವಚ್ಛತೆಯ ಕಾರ್ಯವೈಖರಿಯ ಪರಿಮಿತಿಯ ಮಾಹಿತಿಗಾಗಿ ದೇಶದಲ್ಲಿ ಆಪ್ ಮುಖಾಂತರ  ಸ್ಥಳಿಯ ಸ್ವಚ್ಛತೆಯ ಮಾಹಿತಿ ಅಪ್ ಲೋಡ್‌ಗೆ ಕೆಲ‌ ಪ್ರಶ್ನಾವಳಿ ನೀಡಿದ್ದು, ಸಾರ್ವಜನಿಕರು ಮಾಹಿತಿ ಅಪ್ ಲೋಡ್ ಮಾಡಬೇಕು, ಇಲಾಖೆಯ ಜವಾಬ್ದಾರಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ರವಿಕುಮಾರ್, ರಮೇಶ್ ರೆಡ್ಡಿ, ರವಿಕುಮಾರ್, ಮಂಜಣ್ಣ, ಶಕೀಲ್ ಅಹಮ್ಮದ್, ಪ್ರಭಾರಿ ಬಿಇಓ ಸುರೇಶ್ ರೆಡ್ಡಿ, ಎನ್‌ಎಂಕೆ ಶಾಲೆಯ ಲೋಕೇಶ್, ಆರೋಗ್ಯ ಇಲಾಖೆ ನಿರೀಕ್ಷಕ ಖಿಫಾಯತ್, ಕಂದಾಯ ನಿರೀಕ್ಷಕ ಮೊದೀನ್, ಮುಖಂಡರಾದ ಮಹಮ್ಮದ್ ಗೌಸ್, ಪಲ್ಲಾಗಟ್ಟೆ ಶೇಖರಪ್ಪ  ಮತ್ತಿತರರು ಇದ್ದರು.

error: Content is protected !!