ಬೆಂಗಳೂರಿನ ಸಮಗ್ರ ಶಿಕ್ಷಣ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ
ದಾವಣಗೆರೆ, ಆ. 13- ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಈಡೇರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಸಿಯೂಟ ತಯಾರಕರ ಪದಾಧಿಕಾರಿಗಳಿಗೆ ತಿಳಿಸಿದರು.
ಬೆಂಗಳೂರಿನ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಎ ಐ ಟಿ ಯು ಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಪದಾಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಬಿಸಿಯೂಟ ತಯಾರಕರ ಹಲವಾರು ಬೇಡಿಕೆ ಮತ್ತು ಸಮಸ್ಯೆಗಳ ಕುರಿತು ಅವರು ಚರ್ಚಿಸಿದರು.
ಈಗಾಗಲೇ ಶಿಕ್ಷಣ ಇಲಾಖೆ ಕಮೀಷನರ್ ರವರು ಆದೇಶ ಮಾಡಿರುವಂತೆ ಮುಖ್ಯೋ ಪಾಧ್ಯಾಯರ ಮತ್ತು ಎಸ್ಡಿಎಂಸಿ ಅಧ್ಯಕ್ಷರ ಬ್ಯಾಂಕ್ ಜಂಟಿ ಖಾತೆ ಮಾಡಿಸಲು ಮಾಡಿರುವ ಆದೇಶವನ್ನು ರದ್ದುಪಡಿಸಿ ಅಡುಗೆಯವರು ಮತ್ತು ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆಯನ್ನು ಮುಂದುವರೆಸಬೇಕೆಂದು ಸಭೆಯಲ್ಲಿ ಒತ್ತಾಯ ಪಡಿಸಲಾಯಿತು. ಈಗಾಗಲೇ ನಿವೃತ್ತಿ ಯಾದ ಬಿಸಿಯೂಟ ತಯಾರಕರಿಗೆ ಇಡಿಗಂಟು ಹಣ ಕೊಡುವುದು ಸೇರಿದಂತೆ ಕಳೆದ ಬಜೆಟ್ ನಲ್ಲಿ ಸರ್ಕಾರ ಘೋಷಣೆ ಮಾಡಿದ ಒಂದು ಸಾವಿರ ರೂಪಾಯಿಯನ್ನು ಜೂನ್ ನಿಂದಲೇ ಕೊಡಬೇಕು ಸೇರಿದಂತೆ ಮತ್ತಿತರೆ ಪ್ರಮುಖ ಬೇಡಿಕೆಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕೆಂದು ಸಂಘಟನೆಯಿಂದ ಸಚಿವರ ಗಮನಕ್ಕೆ ತರಲಾಯಿತು. ಸಂಘಟನೆಯವರ ಎಲ್ಲಾ ಬೇಡಿಕೆಗಳನ್ನು ಆಲಿಸಿದ ಸಚಿವರು ಮಾತನಾಡಿ, ಆದ್ಯತೆ ಮೇರೆಗೆ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಇತ್ಯರ್ಥ ಪಡಿಸಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ತಿಳಿಸಿದರು. ಸಭೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತರು, ಮಧ್ಯಾಹ್ನ ಉಪಹಾರ ಯೋಜನೆ ಸಹಾಯಕ ನಿರ್ದೇಶಕರು ಹಾಗು ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಬಿಸಿಯೂಟ ತಯಾರಕರ ಫೆಡರೇಷನ್ ನ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರಾಜ್ಯ ಖಜಾಂಚಿ ರುದ್ರಮ್ಮ ಬೆಳಲಗೆರೆ, ಮುಖಂಡರು ಗಳಾದ ತುಮಕೂರು ಜಿಲ್ಲೆಯ ಪುಷ್ಪಲತಾ, ಉಮಾ ದೇವಿ, ಯಾದಗಿರಿ ಜಿಲ್ಲೆಯ ಕಲ್ಪನಾ, ಶ್ರೀದೇವಿ, ರಾಮನಗರ ಜಿಲ್ಲೆಯ ನಿರ್ಮಲ, ಸಾಕಮ್ಮ, ಹಾವೇರಿ ಜಿಲ್ಲೆಯ ರಾಜೇಶ್ವರಿ ದೊಡ್ಡಮನಿ, ಲಲಿತ ಬುಶೆಟ್ಟಿ, ಶಿವಮೊಗ್ಗ ಜಿಲ್ಲೆಯ ಜಿ ಜಿ ಅಕ್ಕಮ್ಮ, ಪರಮೇಶ್ವರ ಹೊಸಕೊಪ್ಪ, ಕೊಪ್ಪಳ ಜಿಲ್ಲೆಯ ಬೇಗಂ ,ಬೀದರ್ ಜಿಲ್ಲೆಯ ಶಾಂತಕುಮಾರ ಹುಮನಾಬಾದ್, ಚಂದ್ರಶೇಖರ ಪಾಟೀಲ, ಚಿತ್ರದುರ್ಗ ಜಿಲ್ಲೆಯ ಹಳೆಹಳ್ಳಿ ರೇಖಾ, ದಾವಣಗೆರೆ ಜಿಲ್ಲೆಯ ಜ್ಯೋತಿ ಲಕ್ಷ್ಮಿ, ಸರೋಜ, ಮೈಸೂರು ಜಿಲ್ಲೆಯ ಸೋಮರಾಜ ಅರಸ್, ಉತ್ತರ ಕನ್ನಡ ಜಿಲ್ಲೆಯ ಸರಸ್ವತಿ ಭಟ್, ಮೋಹಿನಿ ಸೇರಿದಂತೆ ರಾಜ್ಯ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.