ಜನರನ್ನು ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡಿ ಹೊಸ ಜೀವನಕ್ಕೆ ಕರೆ ತರುವ ವೀರೇಂದ್ರ ಹೆಗ್ಗಡೆಯವರ ಪ್ರಯತ್ನ ದೇಶಕ್ಕೇ ಮಾದರಿ

ಜನರನ್ನು ದುಶ್ಚಟಗಳಿಂದ ಮುಕ್ತರನ್ನಾಗಿ ಮಾಡಿ ಹೊಸ ಜೀವನಕ್ಕೆ ಕರೆ ತರುವ ವೀರೇಂದ್ರ ಹೆಗ್ಗಡೆಯವರ ಪ್ರಯತ್ನ ದೇಶಕ್ಕೇ ಮಾದರಿ

ಕೊಮಾರನಹಳ್ಳಿ : 1705ನೇ ಮದ್ಯವರ್ಜನೆ ಶಿಬಿರದ ಉದ್ಘಾಟನೆಯಲ್ಲಿ ಶಾಸಕ ಹರೀಶ್ ಮೆಚ್ಚುಗೆ

ಮಲೇಬೆನ್ನೂರು, ಆ.11- ದಕ್ಷಿಣ ಭಾರತದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮನೆ ಮಾತಾಗಿದ್ದು, ದುಶ್ಚಟಗಳಿಗೆ ಒಳಗಾಗಿರುವ ಮುಗ್ಧ ಜನರಿಗೆ ಅರಿವು ಮೂಡಿಸಿ, ಅವರನ್ನು ವ್ಯಸನದಿಂದ ಮುಕ್ತರನ್ನಾಗಿ ಮಾಡಿ ಅವರನ್ನೂ ಹೊಸ ಜೀವನಕ್ಕೆ ಕರೆ ತರುವ ಈ ಪ್ರಯತ್ನ ನಿಜಕ್ಕೂ ಶ್ಲ್ಯಾಘನೀಯ ಮತ್ತು ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಅವರು ಶುಕ್ರವಾರ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯಗೋಗದಲ್ಲಿ ಹಮ್ಮಿಕೊಂಡಿದ್ದ 1705ನೇ ಮದ್ಯವರ್ಜನೆ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ನಮ್ಮ ಯುವ ಜನಾಂಗ ಈ ಅನಿಷ್ಟ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇವತ್ತಿನ ಈ ಶಿಬಿರಕ್ಕೆ ಬಂದಿರುವ ಶಿಬಿರಾರ್ಥಿಗಳೂ ಕೂಡ ಯುವ ಜನರೇ ಆಗಿದ್ದಾರೆ. 

ದುಶ್ಚಟಗಳಿಗೊಳಗಾದ ವರು ಅದರಿಂದ ಹೊರಬರುವುದು ಕೂಡ ಅಷ್ಟೇ ಕಷ್ಟವಾಗಿದ್ದು, ಸವಾಲಿನ ಕೆಲವಾಗಿದೆ. ಇಂತಹ ಸವಾಲನ್ನು ಸ್ವೀಕರಿಸಿ ನಿರಂತರ ಶಿಬಿರಗಳ ಯಶಸ್ಸು ಕಾಣುತ್ತಿರುವ ವೀರೇಂದ್ರ ಹೆಗ್ಗಡೆ ಅವರಿಗೆ ನಾವೆಲ್ಲರೂ ಕೈ ಜೋಡಿಸೋಣ ಮತ್ತು ಅವರು ಕಂಡಿರುವ ಪಾನಮುಕ್ತ ರಾಜ್ಯದ ಕನಸನ್ನು ನನಸು ಮಾಡೋಣ ಎಂದು ಹರೀಶ್ ಮನವಿ ಮಾಡಿದರು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ,  ನೀವು ದುಶ್ಚಟಗಳಿಂದ ಹೊರಬಂದರೆ ನಿಮ್ಮ ತಂದೆ-ತಾಯಿ ಮತ್ತು ಹೆಂಡತಿ – ಮಕ್ಕಳು ಖುಷಿಪಟ್ಟಷ್ಟು ಬೇರೆ ಯಾರೂ ಖುಷಿ ಪಡಲ್ಲ ಎಂದು  ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಮಾತನಾಡಿ,  ದುಶ್ಚಟಗಳಿಗೆ ಒಳಗಾದವರನ್ನು ಸಮಾಜದಲ್ಲಿ ಕೀಳು ಭಾವನೆಯಿಂದ ನೋಡುತ್ತಾರೆ. ಅದರಿಂದ ಹೊರಬರಬೇಕೆಂಬ ಭಾವನೆ ನಿಮ್ಮಲ್ಲಿದ್ದರೆ 8 ದಿನ ನೀವು ನಮ್ಮ ಜೊತೆ ಇದ್ದು, ನಾವು ಹೇಳಿದಂತೆ ಕೇಳಿ ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಾಲಿವಾಣ ಗ್ರಾ.ಪಂ. ಅಧ್ಯಕ್ಷ ಡಿ.ಡಿ.ಚಿಕ್ಕಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಪ್ರಗತಿ ಪರ ಕೃಷಿಕ ಹಾಗೂ ಬರಹಗಾರ ಕುಂದೂರು ಮಂಜಪ್ಪ ಮಾತನಾಡಿದರು.

ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ 1704 ಶಿಬಿರಗಳು ನಡೆದಿದ್ದು, 1,25,000ಕ್ಕೂ ಹೆಚ್ಚು ವ್ಯಸನಿಗಳು ದುಶ್ಚಟಗಳಿಂದ ಮುಕ್ತರಾಗಿ ಹೊಸ ಜೀವನ ನಡೆಸುತ್ತಿದ್ದಾರೆ ಎಂದರು.

ಜನಜಾಗೃತಿ ವೇದಿಕೆಯ ಸದಸ್ಯರಾದ ಸಿರಿಗೆರೆ ನಾಗನಗೌಡ್ರು, ಅಣಬೇರು ಮಂಜುನಾಥ್, ರಾಜಶೇಖರ್ ಕೊಂಡಜ್ಜಿ, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿಗೆ ಆನಂದಪ್ಪ, ಮದ್ಯವರ್ಜನೆ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಗೌರವಾಧ್ಯಕ್ಷ ಹುಗ್ಗಿ ರಂಗನಾಥ್, ಉಪ ತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವೀರಯ್ಯ, ಕೊಕ್ಕನೂರು ಸೋಮಶೇಖರ್, ಬೆಣ್ಣೆಹಳ್ಳಿ ಬಸವರಾಜ್, ಭಾನುವಳ್ಳಿ ಸುರೇಶ್, ಆನಂದಾಚಾರ್, ಹಾಲಿವಾಣದ ಮೋಹನ್, ದಿಬ್ದಹಳ್ಳಿ ಓಂಕಾರಪ್ಪ, ಮಡಿವಾಳರ ಬಸವರಾಜ್, ಎಸ್.ಡಿ.ರಂಗನಾಥ್,
ಹೊಟೇಲ್ ಪರಮೇಶ್ವರಪ್ಪ, ಪರಮೇಶ್ವರನಾಯ್ಕ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರಾದ ಸಂಪತ್ ಲಕ್ಷ್ಮಿ, ಹರೀಶ್, ಚಂದ್ರಪ್ಪ, ರಂಗಸ್ವಾಮಿ, ಆಶಾ, ರಂಜಿತಾ, ಸಂತೋಷಿನಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಹಾಗೂ ಸೇವಾ ಪ್ರತಿನಿಧಿಗಳು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಕೊಕ್ಕನೂರು ಅರ್ಚಕ ಹನುಮಂತರಾಯ ಪ್ರಾರ್ಥಿಸಿದರು. ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ವಸಂತ್ ದೇವಾಡಿಗ ಸ್ವಾಗತಿಸಿದರು. ಮೇಲ್ವೆಚಾರಕ ಮಾರುತಿ ನಿರೂಪಿಸಿದರೆ, ಎಂ.ಎಂ.ಹಳ್ಳಿ ವಲಯ ಮೇಲ್ವಿಚಾರಕಿ ರಕ್ಷಿತಾ ವಂದಿಸಿದರು.

error: Content is protected !!