ಹರಪನಹಳ್ಳಿ, ಆ.10- ತಾಲ್ಲೂಕಿನ ತೊಗರಿಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಎರಡನೇ ಬಾರಿಗೆ ಮುಂದೂಡಿದ್ದು, ಮರು ಚುನಾವಣೆಗೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಸದಸ್ಯರು ಸ್ಥಳದಲ್ಲಿ ನಾಲ್ಕನೇ ದಿನದ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಇಂದೂ ಸಹ ಮುಂದುವರೆಸಿದ್ದಾರೆ.
ಎರಡು ಬಾರಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರೂ ಸಹ ಚುನಾವಣಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ, ನಿರ್ಲಕ್ಷ್ಯ ವಹಿಸಿ, ಚುನಾವಣೆ ನಡೆಸಲು ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಮುಖಂಡ ಲಿಂಬ್ಯಾನಾಯ್ಕ ಮಾತನಾಡಿ, ಆ.2ರಂದು ಚುನಾವಣೆ ನಿಗದಿಯಾಗಿತ್ತು, ಆ ಪ್ರಕಾರ ಚುನಾವಣೆಯಲ್ಲಿ ಗ್ರಾಪಂ ಸದಸ್ಯರು ಭಾಗವಹಿಸಿ ಮತದಾನ ಮಾಡಿದ್ದಾರೆ. ಆದರೆ ಫಲಿತಾಂಶ ಗೊಂದಲದಿಂದಾಗಿ ಚುನಾವಣಾಧಿಕಾರಿ ಚುನಾವಣೆಯನ್ನು ಮತ್ತೆ ಮುಂದೂಡಿದ್ದರು. ಅನಾರೋಗ್ಯ ನೆಪ ಹೇಳಿ ಚುನಾವಣೆ ನಡೆಸದೆ, ರಾಜಕೀಯ ಒತ್ತಡಕ್ಕೆ ಮಣಿದು ಚುನಾವಣೆ ಮುಂದೂಡಲು ಯತ್ನಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಚುನಾವಣಾ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ಮಂಜುನಾಥ ಮಾತನಾಡಿ, ಉದ್ದೇಶಪೂರ್ವಕವಾಗಿ ಬೇರೆ ಯಾವುದೇ ಒತ್ತಡಕ್ಕೆ ಮಣಿದು, ಚುನಾವಣೆ ಮುಂದೂಡಲು ವಿವಿಧ ಕಾರಣ ಹೇಳುತ್ತಿರುವ ಚುಣಾವಣಾ ಅಧಿಕಾರಿ ಸೇರಿದಂತೆ, ಕಾರಣರಾದ ಎಲ್ಲಾ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯೆ ರತ್ನಮ್ಮ ಮಾತನಾಡಿ, ಚುನಾವಣೆ ಪ್ರಕ್ರಿಯೆಯನ್ನು ಕಾನೂನು ಪ್ರಕಾರ ನಡೆಸದೆ ಗೊಂದಲವುಂಟು ಮಾಡಿ, ನಮ್ಮನ್ನೆಲ್ಲ ಅತಂತ್ರ ಸ್ಥಿತಿಗೆ ದೂಡಿದ್ದಾರೆ. ಸದಸ್ಯರು ಸಹ ಸಾಕಷ್ಟು ಬಡವರು ಇದ್ದಾರೆ, ಧರಣಿಯಿಂದಾಗಿ ಸರಿಯಾಗಿ ಅನ್ನ, ನೀರು ಸಹ ಸಿಗದೇ ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಚುನಾವಣಾ ಆಯುಕ್ತರು ಇತ್ತ ಗಮನ ಹರಿಸಿ, ಮರು ಚುನಾವಣೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಿಎಸ್‍ಐ ಎಸ್.ಸಿ.ಹಿರೇಮಠ್ ಹಾಗೂ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಸದಸ್ಯರಾದ ಜ್ಯೋತಿನಾಯ್ಕ, ಕೆ.ಆನಂದ, ವೈ.ಮಂಜುನಾಥ, ಸರಿತಾ, ಹನುಮಕ್ಕ, ರುಕ್ಮಿಣಿ, ಗೋಣೆಪ್ಪ, ರತ್ನಮ್ಮ, ಮಾಲಾಶ್ರೀ, ನೇತ್ರಾವತಿ, ಲಕ್ಷ್ಮಮ್ಮ, ಮುಖಂಡರಾದ ಯುವರಾಜನಾಯ್ಕ, ಬಾಗಳಿ ಕೊಟ್ರೇಶಪ್ಪ, ಯಡಿಹಳ್ಳಿ ಶೇಖರಪ್ಪ, ಆರ್.ಲೋಕೇಶ್, ಮಂಜ್ಯಾನಾಯ್ಕ, ಎಂ.ಮಲ್ಲೇಶ್, ಪಂಪನಾಯ್ಕ, ಶಿವಾನಂದ್, ಜೆಟ್ಟೆಪ್ಪ ಸೇರಿದಂತೆ ಇತರರು ಇದ್ದರು.