ಕ್ವಿಟ್ ಇಂಡಿಯಾ ಮಾದರಿಯಲ್ಲೇ `ಕ್ವಿಟ್ ಬಿಜೆಪಿ’ ಚಳವಳಿ

ಕ್ವಿಟ್ ಇಂಡಿಯಾ ಮಾದರಿಯಲ್ಲೇ `ಕ್ವಿಟ್ ಬಿಜೆಪಿ’ ಚಳವಳಿ

ನಗರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ- ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ

ದಾವಣಗೆರೆ, ಆ.9- ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ವಿರೋಧಿಸಿ, ನಗರದಲ್ಲಿ  ಇಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ ನಡೆಸಿ, ವಿಭಾಗಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಸಲ್ಲಿಸಿತು.

ಕೇಂದ್ರ ಸರ್ಕಾರ  ಕಳೆದ 9 ವರ್ಷಗಳಿಂದ ಜನಸಾಮಾನ್ಯರ ಜೀವನ ಮತ್ತು ಜೀವನೋ ಪಾಯದ ಮೇಲೆ ಸಂಕಷ್ಟಗಳ ಸರಮಾಲೆಯನ್ನೇ ಜನರಿಗೆ ಉಡುಗೊರೆಯಾಗಿ ನೀಡಿದೆ.  ನಿರುದ್ಯೋಗ  ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೋಟು ಅಮಾನ್ಯೀಕರಣದಿಂದ ಸಣ್ಣಪುಟ್ಟ ಸ್ವಯಂ ಉದ್ಯೋಗಿಗಳು ಬೀದಿ ಪಾಲಾಗಿದ್ದಾರೆ. ಬಡತನವು ಹೆಚ್ಚಾಗಿ, ಆರ್ಥಿಕ ಕುಸಿತ  ಉಂಟಾಗಿದೆ  ಎಂದು ಜಂಟಿ ಸಮಿತಿ ಆರೋಪಿಸಿದೆ.

ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದರೆ, ವೇತನ ಹೆಚ್ಚಳವಿಲ್ಲದೆ ನಿರ್ಗತಿ ಕತೆಯಿಂದ ಹಸಿವಿನ ಸೂಚ್ಯಂಕವು ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿಗಳು ಆಗುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿವೆ. ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ನೌಕರರನ್ನು ವಜಾ ಗೊಳಿಸುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಮತ್ತು ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ಜಾರಿಗೊಳಿಸುತ್ತಿದೆ. ಗುತ್ತಿಗೆ ಪದ್ಧತಿಯಿಂದ ಶಾಸನ ಬದ್ಧವಾದ ಇಎಸ್ಐ ಮತ್ತು ಪಿಎಫ್ ಹಾಗೂ ಕನಿಷ್ಠ ವೇತನ ನೀಡದೇ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. 

ಕೇಂದ್ರ ಸರ್ಕಾರವು ಬಹಿರಂಗವಾಗಿ ದೊಡ್ಡ ದೊಡ್ಡ ಬಂಡವಾಳಶಾಹಿ ಕಂಪನಿಗಳ ಪರವಾಗಿ ನಿಂತಿದೆ. ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ರಿಯಾಯಿತಿ ಮತ್ತು ಸಾಲಗಳನ್ನು ಮನ್ನಾ ಮಾಡಿದೆ. ಇದರಿಂದ ಸರ್ಕಾರವು ಯಾರ ಪರವಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. 

ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ದೇಶಾದ್ಯಂತ ಕ್ವಿಟ್ ಇಂಡಿಯಾ ಚಳುವಳಿಯ ದಿನದಂದು ಕಾರ್ಮಿಕರು ಬೀದಿಗೆ ಇಳಿದಿದ್ದೇವೆ. ಇದನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸದೇ ಇದ್ದರೆ ಕ್ವಿಟ್ ಇಂಡಿಯಾ ಮಾದರಿಯಲ್ಲಿಯೇ `ಕ್ವಿಟ್ ಬಿಜೆಪಿ’ ಚಳವಳಿ ಮಾಡುವ ಸಂದರ್ಭವು ದೂರವಿಲ್ಲ ಎಂಬ ಸಂದೇಶವನ್ನು ನೀಡಲು ಬಯಸುವುದಾಗಿ  ಜಂಟಿ ಸಮಿತಿ ಎಚ್ಚರಿಸಿದೆ.

ಕಾರ್ಮಿಕರ ದುಡಿತದ ಅವಧಿಯನ್ನು 8ರಿಂದ 12 ಗಂಟೆಗೆ  ಹೆಚ್ಚಿಸಿರುವ ಆದೇಶ ಹಿಂಪಡೆಯ ಬೇಕು.   ಜೀವನ ಯೋಗ್ಯ ವೇತನವನ್ನು ರೂ. 31,500 ಕ್ಕೆ ಹೆಚ್ಚಿಸಬೇಕು. ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್‌ಗಳನ್ನು ರದ್ದುಪಡಿಸಬೇಕು. ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿ ಮಾಸಿಕ 8 ಸಾವಿರ ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು.  ಉದ್ಯೋಗ ಖಾತ್ರಿ ಯೋಜನೆ, ಮನರೇಗಾ ದುಡಿತದ ದಿನ 200ಕ್ಕೆ ಹೆಚ್ಚಿಸಬೇಕು.   ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಮಿಕರನ್ನು ಕನಿಷ್ಟ ವೇತನ ವ್ಯಾಪ್ತಿಗೆ ಒಳಪಡಿಸಬೇಕು.   ವಲಸೆ ಕಾರ್ಮಿಕರಿಗೆ ಸೇವಾ ಭದ್ರತೆ ಮತ್ತು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು.   ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಯನ್ನು ರಚನೆ ಮಾಡಬೇಕು.   ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿಗೊಳಿಸಿ ಮತ್ತು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು. ವಿದ್ಯುತ್ ಶಕ್ತಿ ಮಸೂದೆ 2020 ಅನ್ನು ಕೈ ಬಿಡಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು   ಜಿಲ್ಲಾ ಉಪವಿಭಾಗಾಧಿಕಾರಿ   ಶ್ರೀಮತಿ ದುರ್ಗಾಶ್ರೀ  ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ  ಎಐಟಿಯುಸಿ ರಾಜ್ಯ ಕಾರ್ಯದರ್ಶಿ  ಆವರಗೆರೆ ಚಂದ್ರು,   ಎಐಟಿಯುಸಿ  ಮುಖಂಡರುಗಳಾದ ಹೆಚ್.ಜಿ.ಉಮೇಶ್, ಕೆ. ಬಾನಪ್ಪ, ಎನ್. ಹೆಚ್. ರಾಮಣ್ಣ, ಮಹಮದ್ ರಫೀಕ್, ಆವರಗೆರೆ ವಾಸು, ನರೇಗಾ ರಂಗನಾಥ್, ಜಯಪ್ಪ, ಶಿವಕುಮಾರ್, ಐರಣಿ ಚಂದ್ರು, ಸರೋಜ ಚಿನ್ನಪ್ಪ, ನಾಗಮ್ಮ, ಯರಗುಂಟೆ ಸುರೇಶ್, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾಖಾನಂ, ಶಿರಿನ್ ಬಾನು, ಸಿಐಟಿಯುನ ಕೆ. ಹೆಚ್. ಆನಂದರಾಜ್,                 ಶ್ರೀನಿವಾಸ್, ಐಎನ್‌ಟಿಯುಸಿಯ ರಾಜೇಂದ್ರ ಬಂಗೇರ, ಎಐಯುಟಿಯುಸಿ ತಿಪ್ಪೇಸ್ವಾಮಿ   ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!