ಕುರ್ಕಿ ಗ್ರಾಮದಲ್ಲಿ ಸನ್ಮಾನ ಸಮಾರಂಭ
ಮಾಯಕೊಂಡ, ಆ.8- ನಾನು ಕೆಳ ಸ್ತರದಿಂದ ಬಂದಿದ್ದು, ನೋವುಂಡು ಬೆಳೆದ ವನು. ನನ್ನ ಮಾಯಕೊಂಡ ಕ್ಷೇತ್ರದಲ್ಲಿ ರೈತರು, ಕೃಷಿ ಕಾರ್ಮಿಕರು, ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಾಗಿ ಇದ್ದು ಅವರೆಲ್ಲರ ಕಷ್ಟದ ಅರಿವು ನನಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ನುಡಿದರು.
ಕುರ್ಕಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳ ಪೂರೈಕೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಗ್ರಾಮೀಣ ಜನತೆ ಸಲ್ಲಿಸಿದ ಮನವಿ ಸ್ವೀಕರಿಸಿದ ಬಸವಂತಪ್ಪ, ಈ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿದ್ದು, ಹಂತ-ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಜಿ.ರೇವಣಸಿದ್ದಪ್ಪ, ಶಾಸಕರು ಸಾಮಾನ್ಯ ಜನರ ನೋವುಗಳಿಗೆ ಸ್ಪಂದಿಸುವ ಗುಣ ಹೊಂದಿದ್ದು, ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಿರುವ ಧನ ಸಹಾಯವನ್ನು ಸರ್ಕಾರದಿಂದ ಕೊಡಿಸಬೇಕು ಹಾಗೂ ಗ್ರಾಮದ ಪ್ರಾಥಮಿಕ ಶಾಲೆಗೆ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಹೆಚ್.ಎಸ್.ಮಂಜುನಾಥ ಕುರ್ಕಿ ಅವರು ಅಭಿನಂದನಾ ನುಡಿಗಳನ್ನಾಡಿ, ಶಾಸಕ ಬಸವಂತಪ್ಪನವರು ಸರಳ ಸಜ್ಜನಿಕೆಯ ಬಹುಮುಖ ವ್ಯಕ್ತಿತ್ವ ಹೊಂದಿದ್ದಾರೆ. ಪೌರ ಕಾರ್ಮಿಕನ ಮಗನಾಗಿ ಹುಟ್ಟಿ ಹೋರಾಟದಿಂದಲೇ ಬೆಳೆದವರು. ಇವರಿಗೆ ಜನ ಸಾಮಾನ್ಯರ ಕಷ್ಟಗಳ ಅರಿವಿದೆ. ನೊಂದವರಿಗೆ ಬೆಳಕಾಗಿ ಮೂಕ ಸಮಾಜದ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೆ.ಜಿ.ವೇದಮೂರ್ತಿ ಮಾತನಾಡಿ, ಶಾಸಕರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆ.ಜಿ.ಉಮಾಪತಿ ಮತ್ತು ಕೆ.ಜಿ. ಸಿದ್ದೇಶ್ ಕುರ್ಕಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಎ.ಮುರುಗೇಂದ್ರಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಕೆ.ಸಿದ್ದಬಸಪ್ಪ, ಸಿ.ಕೆ.ಬಸವರಾಜಪ್ಪ, ರುದ್ರಮುನಿ ಆವರಗೆರೆ, ಎ.ಡಿ.ಶಂಕ್ರಪ್ಪ, ಪಿಡಿಓ ಶ್ರೀಮತಿ ರೇಖಾ, ಕೆ.ಜಿ.ನಟರಾಜ್, ಕೆ.ಇ.ಮರುಳಸಿದ್ದಪ್ಪ, ಕೆ.ಎಸ್.ವಿನಾಯಕ, ಕೆ.ಟಿ.ಪಂಚಾಕ್ಷರಪ್ಪ, ಕೆ.ಓ.ಉಮಾಪತಿ, ಕೆ.ನಿಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಎ.ಎಸ್.ಗುರುಮೂರ್ತಿ ಪ್ರಾರ್ಥಿಸಿ ದರು. ಜಿ.ಡಿ.ರಂಗಪ್ಪ ಸ್ವಾಗತಿಸಿದರು. ಕೆ.ಜಿ.ಸಿದ್ದೇಶ್ ಕುರ್ಕಿ ನಿರೂಪಣೆ ಮಾಡಿದರು.