ಕಾರ್ಮಿಕ ಕಛೇರಿಗೆ ಬೀಗ ಜಡಿದ ರೈತರು

ಕಾರ್ಮಿಕ ಕಛೇರಿಗೆ ಬೀಗ ಜಡಿದ ರೈತರು

 ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ  ಕಾರ್ಮಿಕ ನಿರೀಕ್ಷಕಿ  ಅವಧಿಯಲ್ಲಿ ಮಂಜೂರಾದ ಎಲ್ಲಾ ಯೋಜನೆಗಳ  ರದ್ಧತಿಗೆ ರವೀಂದ್ರ ಗೌಡ ಪಾಟೀಲ ಆಗ್ರಹ

ರಾಣೇಬೆನ್ನೂರು, ಆ. 8- ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ  ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ  ಮುಮ್ತಾಜ್ ಬೇಗಂರವರ ಅಧಿಕಾರದ ಅವಧಿಯಲ್ಲಿ ಮಂಜೂರಾದ ಎಲ್ಲಾ ಯೋಜನೆಗಳ ಆಯ್ಕೆ ಪಟ್ಟಿ, ನಿಯಮಗಳನ್ನು ಗಾಳಿಗೆ ತೂರಿ ನೀಡಿರುವು ಎಲ್ಲಾ ಲೇಬರ್ ಕಾಂಟ್ರ್ಯಾಕ್ಟರ್ ಅನುಮತಿಗಳನ್ನು   ಅಮಾನತಿನಲ್ಲಿಟ್ಟು  ‘ಲೋಕಾ’ ಸಮಗ್ರ ತನಿಖೆ ಮಾಡಿ ಆ ಭ್ರಷ್ಟ ಮಹಿಳಾ ಅಧಿಕಾರಿಯನ್ನು ಬಂಧಿಸಬೇಕೆಂದು ರೈತ ಮುಖಂಡ, ಕ.ರಾ.ರೈ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದ್ದಾರೆ. 

ಮಾರುತಿ ನಗರದ ಎರೇಕುಪ್ಪಿ ರಸ್ತೆಯಲ್ಲಿ ರುವ ಕಾರ್ಮಿಕ ಇಲಾಖೆಯ ಕಛೇರಿಗೆ ವಿವಿಧ ಸಂಘಟನೆಗಳಿಂದ ‘ಬೀಗ ಜಡಿಯುವ’ ಕಾರ್ಯ ಕ್ರಮದ ನೇತೃತ್ವ ವಹಿಸಿ, ಕಛೇರಿಗೆ ಬೀಗ ಜಡಿದು ಮಾತನಾಡಿದ ಅವರು, ಮುಮ್ತಾಜ್ ಬೇಗಂ ರವರು ಶಾದಿಭಾಗ್ಯ ಮತ್ತು ಲೇಬರ್ ಕಾಂಟ್ರ್ಯಾ ಕ್ಟರ್ ಅನುಮತಿ ನೀಡುವಾಗ ಹಾಗೂ ಮಹಿಳಾ ಕಾರ್ಮಿಕರ ಅನೇಕ ಸೌಲಭ್ಯಗಳನ್ನು ದುರುಪ ಯೋಗ ಪಡಿಸಿಕೊಂಡಿದ್ದಾರಲ್ಲದೆ, ಅಂಗಡಿ ಮುಂಗಟ್ಟುಗಳ ತಪಾಸಣೆ ವೇಳೆ ಅಲ್ಪವಹಿ ಕೆಲಸಗಾರರನ್ನು ದುಡಿಸಿಕೊಳ್ಳುತ್ತಿದ್ದರೆಂದು ಅನೇಕ ಅಂಗಡಿ ಮಾಲೀಕರಿಗೆ ಮತ್ತು ಹೋಟೆಲ್ ಮಾಲೀಕರಿಗೆ ಹೆದರಿಸಿ, ಬೆದರಿಸಿ ಇವರಿಂದ ಸಾಕಷ್ಟು ಹಣ ಪಡೆದಿರುತ್ತಾರೆ. ಇನ್ನೂ ಅನೇಕ ಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ನಡೆಸಿ ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗುವಂತಹ ಸವಲತ್ತುಗಳನ್ನು ನೀಡಲು ಕಾರ್ಮಿಕರಿಂದ ಸಾಕಷ್ಟು ಹಣವನ್ನು ಲಂಚದ ರೂಪದಲ್ಲಿ ಪಡೆದಿರುತ್ತಾರೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ರಾಣೇಬೆನ್ನೂರಿನಲ್ಲಿ ನಡೆದ ಈ ಭ್ರಷ್ಟಾಚಾರ ಪ್ರಕರಣಗಳು ತಲೆ ತಗ್ಗಿಸುವಂತೆ ಮಾಡಿವೆ, ಹಿರಿಯ ಅಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಈ ಕಛೇರಿಯಲ್ಲಿ ದಿನನಿತ್ಯ ನಡೆದಿರುವ ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದರು. 

ಬೀಗ ಜಡಿದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಾವೇರಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ್ ಮಾತನಾಡಿ, ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ, ಎಲ್ಲಾ ಕಡತಗಳನ್ನು ಮತ್ತು ಪಾಸ್ ಮಾಡಿರುವ ಎಲ್ಲಾ ಅನುಮತಿ ಪತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿಕ್ಕೆ ಹುಬ್ಬಳ್ಳಿ ಅಸಿಸ್ಟೆಂಟ್ ಲೇಬರ್  ಕಮೀಷನರ್ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. 

ಪ್ರತಿಭಟನೆಯಲ್ಲಿ ಸುರೇಶ ಮಲ್ಲಾಪುರ, ಹರಿಹರಗೌಡ ಪಾಟೀಲ, ಚಂದ್ರಣ್ಣ ಬೇಡರ, ಶೈಲಕ್ಕ ಕೊಟ್ಟದ, ಕವಿತಾ ಹೆಚ್.ಎನ್., ಲತಾ ಪಾಟೀಲ, ಬಸವರಾಜ ಕೊಂಗಿಯವರ, ದಿಳ್ಳೆಪ್ಪ ಸತ್ಯಪ್ಪನವರ, ಜಗದೀಶ ಕೆರೂಡಿ, ನಾಗರಾಜ ಆರ್., ಚಂದ್ರು ಬನ್ನಿಹಟ್ಟಿ, ರೇಣುಕಾ ಲಮಾಣಿ, ಬಸವರಾಜ ಯಲ್ಲಕ್ಕನವರ, ಗೀತಾ ಹುಗ್ಗಿ, ಗಿರ್ಜವ್ವ ತೆಂಬದ, ಚಂದ್ರಕಲಾ ಸೊಪ್ಪಿನ ಮುಂತಾದವರು ಭಾಗಹಿಸಿದ್ದರು.

error: Content is protected !!