ಜಗಳೂರಿನ ನಾಲಂದ ಕಾಲೇಜಿನ ಪ್ರಾಚಾರ್ಯ ಸಿ. ತಿಪ್ಪೇಸ್ವಾಮಿ ಅಭಿಮತ
ಜಗಳೂರು, ಆ. 4- ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಕೇವಲ ಒಂದು ಪ್ರಾಂತ್ಯ, ಪ್ರದೇಶ, ಭಾಷೆಗೆ ಸೀಮಿತವಾಗದೆ ಜಗತ್ತಿನ ಜನರ ಬದುಕನ್ನು ಹಸನಾಗಿಸಲು ಬೇಕಾದ ಎಲ್ಲಾ ಅಗಣಿತ ಅಂಶಗಳನ್ನು ಒಳಗೊಂಡು ಕಾಲಾತೀವಾಗಿ ಬೆಳೆದಿದೆ ಎಂದು ನಾಲಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿ. ತಿಪ್ಪೇಸ್ವಾಮಿ ತಿಳಿಸಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ನಾಲಂಬ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫ.ಗು. ಹಳಕಟ್ಟಿ, ಎಂ.ಎಂ. ಕಲ್ಬುರ್ಗಿ, ಸುತ್ತೂರು ಜಗದ್ಗುರುಗಳು, ಸಿರಿಗೆರೆ ಜಗದ್ಗುರುಗಳು ಮುಂತಾದವರು ಕಾಪಿಟ್ಟುಕೊಟ್ಟಿರುವ ವಚನಗಳು ಒಂದು ಅಮೂಲ್ಯ ನಿಧಿ. ಅರಿತರೆ ಶರಣ ಮರೆತರೆ ಮಾನವ ಎನ್ನುವಂತೆ ವಚನಗಳ ಸಾರವನ್ನು ನಾವು ಅರಿತು ನಡೆಯಬೇಕಿದೆ. ವಚನಗಳ ಓದಿನ ಹಿನ್ನೆಲೆಯಲ್ಲಿ ನಮಗೆ ನಾವು ನೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ನಮ್ಮನ್ನು ನಾವು ತಿದ್ದಿಕೊಳ್ಳಲು ವಚನಗಳು ಸಹಕಾರಿ ಎಂಬ ಸತ್ಯವನ್ನು ಅರಿಯಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವಭಾರತಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಪ್ರಭಾಕರ ಲಕ್ಕೋಳ, ಶರಣರ ಬದುಕಿನ ಅನುಭವದ ಗಟ್ಟಿ ಸಾರವೇ ವಚನಗಳು. ಅವು ನಮ್ಮ ಅನುಭವಗಳು ಕೂಡಾ ಆಗಿ ನಮ್ಮ ಬದುಕನ್ನು ಆವರಿಸಿಕೊಂಡಿವೆ. ಹಾಗಾಗಿಯೇ 12ನೇ ಶತಮಾನದಿಂದ ಇಲ್ಲಿಯವರೆಗೆ ವಚನ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಂತಿದೆ ಎಂದು ಬಣ್ಣಿಸಿದರು.
ದತ್ತಿ ದಾನಿಗಳಾದ ಶ್ರೀಮತಿ ಅಕ್ಕಮಹಾದೇವಿ, ಟಿ.ಆರ್. ಮಹೇಶ್ವರಪ್ಪ, ಶ್ರೀಮತಿ ನಿವೇದಿತಾ ಜಿ.ಟಿ. ಮಹೇಶ್ವರಪ್ಪ ಇವರ ಹೆಸರಿನಲ್ಲಿ ವಚನ ಸಾಹಿತ್ಯದ ಪ್ರಸ್ತುತತೆ ಕುರಿತಾಗಿ ಈ ಸಂದರ್ಭದಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಉಪನ್ಯಾಸಕ ಹೆಚ್.ಎಸ್. ವಸಂತ ಮಾತನಾಡಿ, ಮಡಕೆ ದೈವ, ಮರ ದೈವ ಎಂದು ಕಂಡ ಕಂಡ ದೇವರುಗಳಿಗೆ ಕೈಯ ಮುಗಿಯುವುದಕ್ಕಿಂತ ಏಕ ದೇವೋಪಾಸನೆಗೆ ಇಂಬು ನೀಡಿದವರು ಶರಣರು. ಭಯವೇ ಧರ್ಮದ ಮೂಲವಯ್ಯ ಎನ್ನುವುದಕ್ಕಿಂತ ದಯವೇ ಧರ್ಮದ ಮೂಲವಯ್ಯ ಎಂಬುದನ್ನು 12ನೇ ಶತಮಾನದಲ್ಲಿ ಸಾರಿ ಹೇಳಿದವರು. ಅವರ ವೈಚಾರಿಕ ನಡೆ-ನುಡಿಗಳಿಂದ ವಚನಗಳು ಕನ್ನಡದ ಉಪನಿಷತ್ತು ಎಂದು ತೋರಿಸಿದವರು ಎಂದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಟಿ.
ಎರಿಸ್ವಾಮಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ದತ್ತಿ ಉಪನ್ಯಾಸಗಳ ಮಹತ್ವ ತಿಳಿಸಿದರು.
ದತ್ತಿ ದಾನಿಗಳಾದ ಟಿ.ಆರ್. ಮಹಾದೇವಪ್ಪ ಮಾತನಾಡಿ ದರು. ಕಾರ್ಯಕ್ರಮದಲ್ಲಿ ದಿವ್ಯ ಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲರಾಜು, ಕದಳಿ ಮಹಿಳಾ ವೇದಿಕೆಯ ಲೀಲಾವತಿ, ರೇವತಿ, ಶರಣ ಸಾಹಿತ್ಯ ಪರಿಷತ್ತಿ ಕಾರ್ಯದರ್ಶಿ ಗಳಾದ ಈ. ಸತೀಶ್, ರಖೀಬ್, ಚಂದ್ರಕಾಂತ್, ಡಿ.ಸಿ. ಮಲ್ಲಿಕಾರ್ಜುನ, ಎನ್.ಎಂ. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.