ದಾವಣಗೆರೆ, ಆ. 1- ಮಾನವನ ಬದುಕು ಹಸನಾಗಲಿ ಎಂಬುದೇ ಎಲ್ಲಾ ಧರ್ಮಗಳ ಗುರಿಯಾಗಿದೆ. ಧರ್ಮವೇ ಜಗದ ಮೂಲ, ಧರ್ಮವೇ ಬದುಕಿನ ಸೂತ್ರ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಬಾಡಾ ಕ್ರಾಸ್ ಬಳಿ ಇರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಅಧಿಕ ನೂಲು ಹುಣ್ಣಿಮೆಯ 269 ನೇ ಶಿವಾನುಭವಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಮಾನವ ಧರ್ಮದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕಾಗುತ್ತದೆ. ಭಾರತವನ್ನು, ಭಾರತೀಯರನ್ನು ರಕ್ಷಣೆ ಮಾಡುವುದು ಧರ್ಮ ಎಂದರು.
ದೀನ ದಲಿತರ, ನೋಂದವರ ಬದುಕಿನ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದೇ ನಿಜವಾದ ಧರ್ಮ. ಪರಸ್ಪರ ಸಹಕಾರ ಮನೋಭಾವನೆ ಹೊಂದುವ ಮೂಲಕ ಜನರ ಸೇವೆ ಮಾಡುವುದು ಧರ್ಮದ ಗುರಿಯಾಗಿದೆ ಎಂದು ಹೇಳಿದರು.
ಧಾರ್ಮಿಕ ಆಚರಣೆಗಳು, ಅಧ್ಯಾತ್ಮಿಕ ಚಿಂತನೆಗಳಿಗೆ, ಪೂಜಾನುಷ್ಠಾನಗಳಿಗೆ ಅಧಿಕ ಮಾಸ ಕೂಡ ಪ್ರಾಶಸ್ತ್ರ್ಯವಾದುದು. ಇಡೀ ಮನುಕುಲದ ಸೂತ್ರವೇ ಧರ್ಮ. ಮಾನವನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಪಂಚ ಆಚಾರ್ಯರು ಸಂದೇಶ ಸಾರಿದ್ದಾರೆಂದರು.
ಜ್ಞಾನದ ಬೆಳಕನ್ನು ಜಗತ್ತಿನಲ್ಲೇ ಬಿಟ್ಟು, ಮಹಾಬೆಳಕಿನೆಡೆಗೆ ಹೋಗುವ ನಿಟ್ಟಿನಲ್ಲಿ ಶರಣರು, ಸಂತರು, ಯೋಗಿಗಳು ಧಾರ್ಮಿಕ ಚಿಂತನೆಗಳನ್ನು, ಜ್ಞಾನದ ಬೆಳಕನ್ನು ಬಿತ್ತಿ ಹೋಗಿದ್ದಾರೆಂದು ಹೇಳಿದರು.
ಸೆಪ್ಟಂಬರ್ 17 ರಂದು ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪುಟ್ಟರಾಜ ಕವಿ ಗವಾಯಿಗಳ ಪುಣ್ಯಾರಾಧನೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಆಗಮಿಸಲಿದ್ದಾರೆಂದು ತಿಳಿಸಿದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ, ಸಂಗೀತ ಸೇವೆ ಸಮರ್ಪಿಸಿದ ಚಿತ್ರದುರ್ಗದ ಸುಜಿತ್ ಕುಲಕರ್ಣಿ, ದಾಸೋಹ ದಾನಿ ಗಿರೀಶ್, ಬಸವನಗೌಡ ಪೊಲೀಸ್ ಪಾಟೀಲ್, ಕಿತ್ತೂರು ಕೊಟ್ರಪ್ಪ, ತಬಲಾ ಸಾಥ್ ನೀಡಿದ ಸುರೇಶ್, ಗಾಯಕ ಆನಂದ ಪಾಟೀಲ್, ಹಾರ್ಮೋ ನಿಯಂ ಸಾಥ್ ನೀಡಿದ ಭಾಗ್ಯವಂತ ಮುಂತಾದವರು ಇದ್ದರು.