ಎಕ್ಕೆಗೊಂದಿ : ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡಾ. ಚಂದ್ರಮೋಹನ್
ಮಲೇಬೆನ್ನೂರು, ಆ. 1- ಎಕ್ಕೆಗೊಂದಿ ಗ್ರಾಮದ ಅಂಗನವಾಡಿ `ಎ’ ಕೇಂದ್ರದಲ್ಲಿ ಮಂಗಳವಾರ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಟಿಹೆಚ್‌ಓ ಡಾ. ಚಂದ್ರಮೋಹನ್ ಮಾತನಾಡಿ, ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಈ ಎದೆ ಹಾಲು ಬೇರೆ ಯಾವ ಕೈಗಾರಿಕೆಯಲ್ಲೂ ಉತ್ಪಾದಿಸಲು ಸಾಧ್ಯವಿಲ್ಲ. ಇದು ನೈಸರ್ಗಿಕವಾಗಿ ದೇವರು ಸೃಷ್ಟಿಸಿದ ವರವಾಗಿದೆ. ಆದ್ದರಿಂದ ಮಗು ಜನಿಸಿದ ಅರ್ಧ ಘಂಟೆಯೊಳಗೆ ಎದೆ ಹಾಲು ಉಣಿಸಬೇಕು ಎಂದು ಡಾ. ಚಂದ್ರಮೋಹನ್ ತಿಳಿಸಿದರು.
ತಾಲ್ಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಧಾ ಮಾತನಾಡಿ, ಗರ್ಭಿಣಿ ಅವಧಿಯಲ್ಲಿ ತಾಯಂದಿರಿಗೆ ತಾಯಿ ಕಾರ್ಡಿನ ಮಹತ್ವ ಮತ್ತು ಲಸಿಕೆಯ ಬಗ್ಗೆ ಮಾಹಿತಿ ತಿಳಿಸಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ ಮಾತನಾಡಿ, ವಿಶ್ವ ಸ್ತನ್ಯಪಾನ ಕಾರ್ಯಕ್ರಮವನ್ನು ಇದೇ ದಿನಾಂಕ 1 ರಿಂದ 7ರವರೆಗೆ ಆಚರಿಸಲಾಗುತ್ತದೆ. ಇದು ಈ ತಿಂಗಳಿಗಷ್ಟೇ ಸೀಮಿತವಾಗಿರದೆ ಸಮತೋಲನ ಆಹಾರ ಮತ್ತು ಪೌಷ್ಠಿಕ ಆಹಾರ ಎಲ್ಲಾ ಮಕ್ಕಳ ತಾಯಂದಿರು ಮತ್ತು ಗರ್ಭಿಣಿಯರು ತೆಗೆದುಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಬಾಣಂತಿಯರಿಗೆ ಹೆಚ್ಚಾಗಿ ಎದೆ ಹಾಲು ಉತ್ಪತ್ತಿ ಯಾಗುತ್ತದೆ ಎಂದು ತಿಳಿಸಿದರು.
ಭಾನುವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳಿಗೆ ತಾಯಿಯ ಎದೆ ಹಾಲು ಕುಡಿಸುವುದರಿಂದ ಮೆದುಳು ಚುರುಕಾಗುತ್ತದೆ ಮತ್ತು ಸಮಾಜದಲ್ಲಿ ಅಂತಹ ಮಕ್ಕಳು ಸದೃಢ ಮಕ್ಕಳಾಗುತ್ತಾರೆ. ಈ ವರ್ಷದ ಘೋಷಣೆ ದುಡಿಮೆ ಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಬದಲಾವಣೆಯನ್ನು ಉಂಟು ಮಾಡುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಶ್ರೀಮತಿ ನಂದಿನಿ, ಶ್ರೀಮತಿ ಉಷಾ ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.