ಹಿರಿಯ ಸಾಹಿತಿ ಟಿ. ಗಿರಿಜಾ ಸಂಸ್ಮರಣೆ, ದತ್ತಿ ಉಪನ್ಯಾಸ, ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಬಿ. ವಾಮದೇವಪ್ಪ
ದಾವಣಗೆರೆ, ಆ.1- ಕನ್ನಡ ನಾಡು ಅತ್ಯಂತ ಸಮೃದ್ಧಿಭರಿತವಾದ ನಾಡು. ಕನ್ನಡದಲ್ಲಿ ಮಾತನಾಡುವುದು ಸಂತೋಷಕರ. ವಿಜ್ಞಾನಿ ಚಂದ್ರಶೇಖರ್, ಸರ್ ಎಂ. ವಿಶ್ವೇಶ್ವರಯ್ಯ ಮೊದಲಾದವರು ಕನ್ನಡ ಮಾಧ್ಯಮದಲ್ಲೇ ಅಧ್ಯಯನ ಮಾಡಿ ವಿಶ್ವ ಖ್ಯಾತಿ ಪಡೆದಂತವರು. ಎಲ್ಲರ ಜೀವನದಲ್ಲಿ ಕೂಡ ಕನ್ನಡ ಭಾಷೆ ಪ್ರಧಾನವಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ನಗರದ ಮಹಿಳಾ ಸಮಾಜದ ಪ್ರಥಮ ದರ್ಜೆ ಕಾಲೇಜಿನ ತಾಲ್ಲೂಕು ಕಸಾಪ, ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜದ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ಟಿ. ಗಿರಿಜಾ ಸಂಸ್ಮರಣೆ, ದತ್ತಿ ಉಪನ್ಯಾಸ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದ ಉದ್ಘಾ ಟನೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ 108 ವರ್ಷಗಳ ಇತಿಹಾಸವಿದೆ. ನಮ್ಮ ಕನ್ನಡ ನಾಡು ಸಂಪದ್ಭರಿತವಾಗಿದ್ದು, ಇಲ್ಲಿ ಚಿನ್ನ, ಶ್ರೀಗಂಧ, ಅದಿರು, ಜಲದ ರಾಶಿಗಳು, ಯಾವ ಅಪಾಯಕ್ಕೆ ಸಿಗದೇ ಇರುವಂತಹದ್ದು, ಕನ್ನಡ ಸಾಹಿತ್ಯ ಪರಿ ಷತ್ತಿನಲ್ಲಿ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿ ಕನ್ನಡ ಸಾಹಿತ್ಯಕ್ಕೆ ಕಾರ್ಯ ನಿರ್ವಹಿಸುತ್ತಿವೆ.
ಟಿ. ಗಿರಿಜರವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಆದಮ್ಯ ಕೊಡುಗೆಯನ್ನು ನೀಡಿದ್ದಾರೆ ಎಂದು ವಾಮದೇವಪ್ಪ ಶ್ಲ್ಯಾಘಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಎಸ್.ಎ. ಗೌರಮ್ಮ ಮಾತನಾಡಿ, ಟಿ. ಗಿರಿಜಾ ಅವರು ಅನೇಕ ಕಥೆ, ಅಂಕಣ, ಲೇಖನ, ಕಾದಂಬರಿಗಳು, ನಾಟಕಗಳು, ಸಾಮಾಜಿಕ, ಗ್ರಾಮಗಳ ಬಗ್ಗೆ, ನದಿಗಳು ಹೀಗೆ ಅನೇಕ ವಿಚಾರ ಕುರಿತಾಗಿ ಆಳವಾಗಿ ಅಧ್ಯಯನವನ್ನು ಮಾಡಿ ಪುಸ್ತಕಗಳನ್ನು ಹೊರತಂದವರು. ಹಾವೇರಿಯ ಜಾನಪದ ವಿವಿಯಿಂದ 25 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಹೊರ ತರಲು ಕೆಲ ವರ್ಷಗಳಿಂದ ಪ್ರಯತ್ನ ನಡೆದಿದೆ. ಆದರೆ, ಯಾವುದೇ ತಂತ್ರಜ್ಞಾನದ ಸಹಾಯ ಇಲ್ಲದ ಕಾಲದಲ್ಲಿ ತಾವೇ ಸ್ವತಃ ಖುದ್ದಾಗಿ ಹೋಗಿ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ವಿಷಯವನ್ನು ಸಂಗ್ರಹಿಸಿ 200ಕ್ಕೂ ಹೆಚ್ಚು ಗ್ರಾಮಗಳ ಚರಿತ್ರೆ ಬರೆದಿದ್ದು, ವಿಶೇಷವಾದದ್ದು, ಜೀವನದಲ್ಲಿ ಅನೇಕ ನೋವುಗಳನ್ನು ಅನುಭವಿಸಿ, ಅದನ್ನೆಲ್ಲಾ ಲೆಕ್ಕಿಸದೆ ತಮ್ಮ ಕಠಿಣ ಪರಿಶ್ರಮ, ಗುರಿ, ಶ್ರದ್ಧೆ, ಪ್ರಾಮಾಣಿಕತೆ ಪ್ರಯತ್ನ ಎಲ್ಲದಕ್ಕಿಂತ ಹೆಚ್ಚಾಗಿ ಆತ್ಮ ವಿಶ್ವಾಸ ಇದ್ದುದರಿಂದ ಅವರು ಜೀವನದಲ್ಲಿ ಯಶಸ್ಸು ಕಂಡರು. ನಾವು ಕೂಡ ಜೀವನದಲ್ಲಿ ಆತ್ಮ ವಿಶ್ವಾಸವಿದ್ದರೆ ಎಂತಹ ಸವಾಲುಗಳನ್ನಾರೂ ಎದುರಿಸಿ ಬದುಕಿನಲ್ಲಿ ಸಾಧನೆ ಮಾಡುತ್ತೇವೆ ಎಂದರು.
ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಪಿ.ಎಂ. ಅನುರಾಧ ಮಾತನಾಡಿ, ಹೆಣ್ಣು ತಾನು ಅಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ತನ್ನ ಮನಸ್ಸಿನಲ್ಲಿ ಇರುವಂತಹ ಅಭಿವ್ಯಕ್ತಿ ಸಾಹಿತ್ಯವನ್ನು ಹೊರ ಹಾಕಲು ಕೆಲವೊಮ್ಮೆ ಹಿಂಜರಿಯುತ್ತಾಳೆ. ಕಾರಣ ಅವರು ಹೆಣ್ಣು ತಾನು ಎಷ್ಟೇ ಮಾನಸಿಕವಾಗಿ ಬಲಿಷ್ಟವಾಗಿದ್ದರೂ ಕೂಡ ನೇರವಾಗಿ ಸತ್ಯವನ್ನು ಹೇಳುವುದಕ್ಕೆ ಆಗುವುದಿಲ್ಲ. 12ನೇ ಶತಮಾನದಲ್ಲಿ ಅಕ್ಕಮಹಾದೇವಿಯಂತವರು ಅಧ್ಯಾತ್ಮಿಕತೆಯ ಮೂಲಕ ವಚನಗಳನ್ನು ರಚಿಸಿದ್ದಾರೆ. ಅಲ್ಲಿ ಅವಳು ತನ್ನ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನನ್ನು ನೆನೆಯುತ್ತಾ ತನ್ನ ಆಸೆ – ಆಕಾಂಕ್ಷೆಗಳನ್ನು ವಚನ ರೂಪದಲ್ಲಿ ರಚಿಸಿದರು ಎಂದು ತಿಳಿಸಿದರು.
ಲೇಖಕಿ ಶೈಲಜಾ ಮಾತನಾಡಿ, ಗಿರಿಜಾ ಅವರು ಯಾವುದೇ ರೀತಿಯ ಆಸ್ತಿ ಮಾಡಲಿಲ್ಲ. ಅವರಿಗೆ ಬರುತ್ತಿದ್ದ 8 ಸಾವಿರ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದರು. ಅದರಲ್ಲೇ ಪುಸ್ತಕ ಪ್ರಕಟಣೆ ಮಾಡುತ್ತಿದ್ದರು. ಅವರ ಭಾರತದ ನದಿಗಳು ಕೃತಿಯನ್ನು ಶೀಘ್ರವೇ ಇಂಗ್ಲಿಷ್ಗೆ ಅನುವಾದ ಮಾಡಿಸಿ, ಬಿಡುಗಡೆಗೊಳಿಸುವ ಯೋಚನೆ ಇದೆ ಎಂದರು.
ಕವಯತ್ರಿ ಅರುಂಧತಿ ರಮೇಶ್ ಅವರ ಭವದ ಬೆಳಕು ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಮ್ಮ ನಾಗರಾಜ್ ವಹಿಸಿ, ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಕಂಚಿಕೆರೆ ಸುಶೀಲಮ್ಮ, ಕಾರ್ಯದರ್ಶಿ ನೀಲಗುಂದ ಜಯಮ್ಮ, ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರಸನ್ನ ರೆಡ್ಡಿ, ದಾಗಿನಕಟ್ಟೆ ಪರಮೇಶ್ವರಪ್ಪ ಮತ್ತಿತರರಿದ್ದರು.