ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ
ಚನ್ನಗಿರಿ, ಆ.1- ಪಟ್ಟಣದ ತಾ.ಪಂ. ಕಚೇರಿಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶಾಸಕರಾದ ಬಸವರಾಜು ವಿ. ಶಿವಗಂಗಾ ಹಾಗೂ ಕೆ.ಎಸ್ ಬಸವಂತಪ್ಪ ನೇತೃತ್ವದಲ್ಲಿ ಮೊದಲನೇ ತಾಲ್ಲೂಕ್ ಪಂಚಾಯಿತಿ ಅಭಿವೃದ್ಧಿ ಸಭೆ ನಡೆಸಲಾಯಿತು.
ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶಾಸಕರು ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಏನೇ ಇದ್ದರು ತಕ್ಷಣ ಬಗೆಹರಿಸುವಂತೆ ಸೂಚಿಸಿದರು.
ಅಪೂರ್ಣಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದು, ಅದರ ವರದಿ ಒಪ್ಪಿಸುವಂತೆ ತಿಳಿಸಿದರು. ಕಳಪೆ ಗುಣಮಟ್ಟದ ಕಾಮಗಾರಿ ಕಂಡು ಬಂದಲ್ಲಿ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕೆಂದು ಶಾಸಕ ಬಸವರಾಜು ವಿ. ಶಿವಗಂಗಾ ಸೂಚಿಸಿದರು.
ನಮ್ಮ ಸರ್ಕಾರ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು, ಸಹಕಾರ ನೀಡುತ್ತದೆ. ಅಧಿಕಾರಿಗಳು ಅದನ್ನು ಕಾರ್ಯರೂಪಕ್ಕೆ ತಂದು ಜನರಿಗೆ ಅನೂಕೂಲ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ. ಇಓ ಉತ್ತಮ್, ತಹಶೀಲ್ದಾರ್ ಯರ್ರಿಸ್ವಾಮಿ ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.