ಫೈನಾನ್ಸ್‍ಗಳಿಗೆ ಮಾನದಂಡ ವಿಧಿಸಬೇಕು

ಫೈನಾನ್ಸ್‍ಗಳಿಗೆ ಮಾನದಂಡ ವಿಧಿಸಬೇಕು

ಹೊನ್ನಾಳಿಯಲ್ಲಿನ ರೈತ ಹುತಾತ್ಮ ದಿನಾಚರಣೆಯಲ್ಲಿ ಹೊಳೆಹರಳಹಳ್ಳಿ ಬಸವರಾಜಪ್ಪ ಒತ್ತಾಯ

ಹೊನ್ನಾಳಿ, ಆ.1-  ರಾಜ್ಯ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ  ಹೆಚ್‍.ಎಸ್.ರುದ್ರಪ್ಪನವರ 43ನೇ ರೈತ ಹುತಾತ್ಮ ದಿನಾಚರಣೆಯನ್ನು ಹಿರೇಕಲ್ಮಠದಲ್ಲಿ ಸರಳವಾಗಿ ಆಚರಿಸಲಾಯಿತು.  ರೈತ ಮುಖಂಡರು ಕಡದಕಟ್ಟೆಯ ಯುಟಿಪಿ ಬಳಿ ಇರುವ ಹೆಚ್.ಎಸ್.ರುದ್ರಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಹೊನ್ನಾಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅರಬಗಟ್ಟಿ ಬಸಪ್ಪ ಮಾತನಾಡಿ, ಪ್ರತಿವರ್ಷವೂ ಜುಲೈ 19 ರಂದು ರೈತ ಹುತಾತ್ಮ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ರಾಜ್ಯ ರೈತ ಮುಖಂಡರು ಜನಪ್ರತಿನಿಧಿಗಳು ಸತತ ಮಳೆ ಹಾಗೂ ಇತರೆ ನಿಗದಿತ ಕಾರ್ಯಕ್ರಮಗಳಿಂದಾಗಿ ಈ ವರ್ಷ ಸರಳವಾಗಿ ಆಚರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ನ್ಯಾಮತಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಳಗುತ್ತಿ ಉಮೇಶ್ ಮಾತನಾಡಿ, ರೈತರ ಹಿತದೃಷ್ಟಿಯಿಂದ ಗಾಜನೂರು ಡ್ಯಾಮನ್ನು ಎರಡು ಅಡಿ ಎತ್ತರಗೊಳಿಸಿ,   ಯುಟಿಪಿ ನಾಲೆಯಲ್ಲಿ ಪ್ರತಿವರ್ಷವು ಸರ್ಕಾರ ಫೆಬ್ರವರಿ- ಮಾರ್ಚ್‌ ತಿಂಗಳಲ್ಲಿ  ನೀರು ಬಿಡುವುದರಿಂದ ತಾಲೂಕಿನಲ್ಲಿ ಅಂತರ್ಜಲ ಹೆಚ್ಚಾಗಲಿದ್ದು, ರೈತರ ಬೆಳೆಗೆ ಸಹಕಾರಿ ಯಾಗಲಿದೆ ಎಂದರು.

 ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟಿ ಕರಿಬಸಪ್ಪ ಮಾತನಾಡಿ, ಜೂನ್ ತಿಂಗಳ 18ರಲ್ಲೇ ಕೆರೆಗಳಿಗೆ ಹೊಳೆಯಿಂದ ನೀರು ತುಂಬಿಸುವ ಪ್ರಕ್ರಿಯೆ ನಡೆಯಬೇಕಿತ್ತು, ಆದರೆ ಈವರೆಗೂ ಅದು ಏಕೆ ನೆನೆಗುದಿಗೆ ಬಿದ್ದಿದೆ? ಎಂದು ಪ್ರಶ್ನಿಸಿ, ರೈತರ ಅನುಕೂಲಕ್ಕಾಗಿ ಶಾಸಕ ಶಾಂತನಗೌಡರು ಸರ್ಕಾರದ ಮೇಲೆ ಒತ್ತಡ ಹಾಕಿ ತಾಲ್ಲೂಕಿನ ಕೆರೆ ತುಂಬಿಸುವ ಕಾಮಗಾರಿ   ಕೈಗೆತ್ತಿಕೊಳ್ಳಬೇಕು ಎಂದರು.

ತಾಲೂಕು ರೈತ ಸಂಘದ ಉಪಾಧ್ಯಕ್ಷ ಹೊಳೆಹರಳಹಳ್ಳಿ ಬಸವರಾಜಪ್ಪ ಮಾತನಾಡಿ, ರೈತರು ಫೈನಾನ್ಸ್‍ಗಳಲ್ಲಿ ಸಾಲ ಮಾಡಿ ಟ್ರ್ಯಾಕ್ಟರ್ ತೆಗೆದುಕೊಳ್ಳುತ್ತಾರೆ. ಆದರೆ ರೈತರು ಕಂತು ಕಟ್ಟುವಾಗ  ಪ್ಲಾಟ್ ಬಡ್ಡಿ ಹಾಕಿ ರೈತರಿಗೆ ಹೊರೆ ಮಾಡುತ್ತಾರೆ. ಇದರಿಂದ ಎಷ್ಟೋ ರೈತರು ಸಾಲ ಕಟ್ಟಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಫೈನಾನ್ಸ್‍ಗ ಳಿಗೆ ಮಾನದಂಡಗಳನ್ನು ವಿಧಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಹೊನ್ನಾಳಿ ತಾಲ್ಲೂಕು ಗೌರವಾಧ್ಯಕ್ಷ ಎಂ.ಬಸವರಾಜಪ್ಪ, ಜಿಲ್ಲಾ ಉಪಾಧ್ಯಕ್ಷ ಮುರುಗೇಶ್‍ ಜೋಗ,  ಬಸವನಹಳ್ಳಿ ಆನಂದಪ್ಪ,   ಡಿ.ಎಂ. ಕರಿಬಸಪ್ಪ, ಗೋಣಿಗೆರೆ ಕುಬೇರಪ್ಪ ಒಡೆಯರ ಹತ್ತೂರ ಹಾಲೇಶ, ದೇವರ ಹೊನ್ನಾಳಿ ನಾರಾಯಣ ಮೂರ್ತಿ, ಶ್ರೀನಿವಾಸಮೂರ್ತಿ, ನೀಲಕಂಠ ರಾಯ್ಕರ್, ತುಗ್ಗಲಹಳ್ಳಿ ಹೇಮಪ್ಪ, ಹೊನ್ನಾಳಿ ಜಯಪ್ಪ, ಯೋಗೇಶ್, ನಾಗಣ್ಣ, ಚಂದ್ರಪ್ಪ, ಶಿವರಾಜ್ ಅರಬಗಟ್ಟೆ ಸಣ್ಣಚಿಕ್ಕಪ್ಪ ಇತರರು ಇದ್ದರು.

error: Content is protected !!