5 ಕೋಟಿ ರೂ.ಗಳಲ್ಲಿ ಕೊಟ್ಟೂರೇಶ್ವರ ದೇವಸ್ಥಾನ ಅಭಿವೃದ್ಧಿ

5 ಕೋಟಿ ರೂ.ಗಳಲ್ಲಿ ಕೊಟ್ಟೂರೇಶ್ವರ ದೇವಸ್ಥಾನ ಅಭಿವೃದ್ಧಿ

ಕೊಟ್ಟೂರಿನ ಶಾಸಕ ಕೆ. ನೇಮರಾಜನಾಯ್ಕ

ಕೊಟ್ಟೂರು, ಜು. 30 – ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು 5 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಕೆ. ನೇಮರಾಜನಾಯ್ಕ ತಿಳಿಸಿದ್ದಾರೆ.

ಇಲ್ಲಿನ ಶ್ರೀ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ನಡೆದ ಅಭಿವೃದ್ಧಿ ಮತ್ತು ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಾಡಿನಾದ್ಯಂತ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ನೆರಳು, ವಸತಿ, ಪ್ರಸಾದ, ನೀರು ಸೇರಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ದೇವಸ್ಥಾನದ ನಿಧಿಯಿಂದ 5ಕೋಟಿ ರೂ.ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನು ಪ್ರತ್ಯೇಕ ವ್ಯವಸ್ಥೆಯನ್ನು ಹೆಚ್ಚಿನ ರೀತಿಯಲ್ಲಿ ಕಲ್ಪಿಸಬೇಕೆಂದು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ದೇವಸ್ಥಾನದ ಬಲ ಬದಿಯಲ್ಲಿ ದರ್ಶನಕ್ಕೆ ನಿಲ್ಲುವ ಭಕ್ತರಿಗೆ ನೆರಳಿನಾಶ್ರಯಕ್ಕಾಗಿ ಮೇಲ್ಚಾವಣಿ ನಿರ್ಮಿಸಲಾಗುವುದು. ದೇವಸ್ಥಾನದ ಕೊಠಡಿಗಳಲ್ಲಿ ಬಳಕೆಯಾಗುವ ನೀರು ಹೊರಹೋಗಲು ಪ್ರತ್ಯೇಕ ಡ್ರೈನೇಜ್ ಹಾಗೂ  ಇಟ್ಟಿಗಿ ರಸ್ತೆಯಲ್ಲಿರುವ ದೇವಸ್ಥಾನದ ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು. ಸ್ವಾಮಿ ರಥೋತ್ಸವ ಸಾಗುವ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ತೀರ್ಮಾನಿಸಿದೆ. ದೇವಸ್ಥಾನದ ಗೋಪುರ ಕಳಶಕ್ಕೆ ಭದ್ರತೆ ಮಾಡಿ ಬಂಗಾರದ ಲೇಪನ ಮಾಡುವ ಯೋಜನೆ ಮಾಡಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಲು 300 ಕೊಠಡಿಗಳ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದು, ಇದನ್ನು ಮುಂದಿನ ವರ್ಷದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಎಂಎಜೆ ಹರ್ಷವರ್ಧನ ಮಾತನಾಡಿ, ದೇವಸ್ಥಾನ ಅಭಿವೃದ್ಧಿಗೆ ಶಾಸಕ ಕೆ. ನೇಮಿರಾಜನಾಯ್ಕ ಅವರು 2009ರಲ್ಲಿ ಶ್ರಮಿಸಿದ್ದರಿಂದ 30ಕ್ಕೂ ಹೆಚ್ಚು ಕೊಠಡಿಗಳು ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿಯೂ ಶಾಸಕರು ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಲ್ಪಿಸುತ್ತಾರೆ ಎಂದು ಹೇಳಿದರು.

ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್. ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು ಸಾನ್ನಿಧ್ಯ ವಹಿಸಿದ್ದರು. ಧರ್ಮಕರ್ತ ಸಿ.ಎಚ್‌.ಎಂ. ಗಂಗಾಧರ, ಮುಖಂಡರಾದ ಬಾದಾಮಿ ಮುತ್ತಣ್ಣ, ಮಲ್ಲಿಕಾರ್ಜುನ, ಕೊಟ್ರೇಶ್‌ ಕಾಮಶೆಟ್ಟಿ, ನಾಗರಾಜ್ ಮರಬದ ಪ.ಪಂ. ಸದಸ್ಯ ಕೊಟ್ರೇಶ್  ಗುರುಬಸವರಾಜ, ಎಂ.ಕೊಟ್ರೇಶ, ಬಿ. ದುರುಗೇಶ ಇತರರು ಇದ್ದರು. ದೇವಸ್ಥಾನದ ಇಒ ಕೃಷ್ಣಪ್ಪ  ಕಾರ್ಯಕ್ರಮ ನಿರ್ವಹಿಸಿದರು.

error: Content is protected !!