ಆ.1 ರಿಂದ ನಾಲೆಗಳಿಗೆ ಭದ್ರಾ ನೀರು ಹರಿಸಲು ಒತ್ತಾಯ

ಆ.1 ರಿಂದ ನಾಲೆಗಳಿಗೆ ಭದ್ರಾ ನೀರು ಹರಿಸಲು ಒತ್ತಾಯ

`ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಮತ್ತು ಶಾಸಕರಾಗಲೀ ಏಕೆ ಈ ಬಗ್ಗೆ ಚಕಾರವೆತ್ತಿಲ್ಲ’     

– ರೈತರ ಒಕ್ಕೂಟದ ಪ್ರಶ್ನೆ

ದಾವಣಗೆರೆ, ಜು. 28- ಮಧ್ಯ ಕರ್ನಾ ಟಕದ ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ  ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸ ತಂದಿದೆ.   ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯು ತ್ತಾರೆ. ಆದರೆ, ಈವರೆಗೂ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ. ತೋಟಗಾರಿಕೆ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಮತ್ತು ಜಿಲ್ಲೆಯ ಶಾಸಕರಾಗಲೀ ಇದುವರೆಗೂ ಏಕೆ ಈ ಬಗ್ಗೆ ಚಕಾರವೆತ್ತಿಲ್ಲ  ಎಂದು ರೈತರ ಒಕ್ಕೂಟ ಪ್ರಶ್ನಿಸಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ  ಜಿಲ್ಲೆಯ ಅರ್ಧದಷ್ಟು ರೈತರು, ಬೇರೆ ಮೂಲಗಳ ನೀರು ಬಳಸಿ, ಈಗಾಗಲೇ ಭತ್ತದ ಸಸಿ ಬೆಳೆಸಿಕೊಂಡಿ ದ್ದಾರೆ. ಇನ್ನುಳಿದ ಅರ್ಧದಷ್ಟು ರೈತರು ಭದ್ರಾ ನೀರು ಹರಿಸಿದ ಮೇಲೆ ಬೀಜ ಚೆಲ್ಲುವವರಿದ್ದಾರೆ.  ಮುಂಗಡವಾಗಿ ಸಸಿ ಬೆಳೆಸಿಕೊಂಡವರಿಗೂ ತಡವಾಗಿ ಸಸಿ ಬೆಳೆಸಿಕೊಳ್ಳುವವರಿಗೂ ಎರಡು ತಿಂಗಳ ಅವಧಿಯ ಅಂತರವಾಗುತ್ತದೆ. ಮುಂದೆ ಭತ್ತ ಕಟಾವು ಅವಧಿಯಲ್ಲಿ ಎರಡು ತಿಂಗಳು  ಹೆಚ್ಚುವರಿಯಾಗಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಆಗಸ್ಟ್ 1ನೇ ತಾರೀಖಿನಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು. 

ನಮ್ಮ ಡ್ಯಾಂನ ಕಳೆದ 60 ವರ್ಷಗಳ ಇತಿಹಾಸ ಪರಿಶೀಲಿಸಿದಾಗ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ತುಂಬಿರುವ ಉದಾಹರಣೆ ಹೆಚ್ಚು ಇದೆ. ಇದು ಮಳೆಗಾಲವಾಗಿರುವುದರಿಂದ ನೀರಿನ ಸಂಗ್ರಹ ನೋಡಿಕೊಂಡು ವೇಳಾಪಟ್ಟಿ ಪ್ರಕಾರ ನೀರು ಹರಿಸಬೇಕು. ಬೇಸಿಗೆಯಲ್ಲಿ ಮಾತ್ರ ನಿರಂತರ ನೀರು ಹರಿಸಬೇಕು ಎಂದು  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತ ಒಕ್ಕೂಟದ ಸದಸ್ಯರು ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಅವರು,  ಈ ಬಗ್ಗೆ ಪರಿಶೀಲಿಸಿ, ರೈತರಿಗೆ ಭತ್ತ ಬೆಳೆಯಲು ಅನುಕೂಲವಾಗುವಂತೆ ಶೀಘ್ರದಲ್ಲೇ ನೀರು ಹರಿಸಲು ತೀರ್ಮಾನಿ ಸಲಾಗುವುದು. ರೈತರ ಹಿತಾಸಕ್ತಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ರೈತ ಒಕ್ಕೂಟದ ನಿಯೋಗದಲ್ಲಿ ಮುಖಂಡರಾದ ಕೊಳೇನಹಳ್ಳಿ ಬಿ. ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ಮಳಲ್ಕೆರೆ ಸದಾನಂದ, ಅತ್ತಿಗೆರೆ ದೇವರಾಜ್, ಗೋಪನಾಳ್ ಹೆಚ್.ಕೆ.ಪಾಲಾಕ್ಷಪ್ಪ, ಆರನೇಕಲ್ಲು ವಿಜಯ ಕುಮಾರ್, ಬಲ್ಲೂರು ಬಸವರಾಜ, ಗೋಪನಾಳ್ ಅಶೋಕ್, ಗೋಣಿವಾಡದ ಪಿ.ಎ.ನಾಗರಾಜಪ್ಪ, ಆಲೂರು ಲಿಂಗರಾಜು, ಲೋಕಿಕೆರೆ ಕೆ. ಎನ್. ತಿಪ್ಪೇಸ್ವಾಮಿ, ತುರ್ಚಘಟ್ಟದ ಪುಟ್ಟರಾಜು, ಗೋಣಿವಾಡದ ಚನ್ನಾಚಾರಿ ಮುಂತಾದವರಿದ್ದರು

ಈ ಸಂದರ್ಭದಲ್ಲಿ ರೈತ ಒಕ್ಕೂಟದ ವತಿಯಿಂದ ನೂತನ ಜಿಲ್ಲಾಧಿಕಾರಿಗಳಿಗೆ ಹಸಿರು ಶಾಲು ಹೊದಿಸಿ, ಸನ್ಮಾನಿಸಲಾಯಿತು.

error: Content is protected !!