ಡಿಸಿ ಆದೇಶ ದಿಕ್ಕರಿಸಿದ ಶಾಲೆಗಳು

ಡಿಸಿ ಆದೇಶ ದಿಕ್ಕರಿಸಿದ ಶಾಲೆಗಳು

ನೋಟಿಸ್ ನೀಡಿದ ರಾಣೇಬೆನ್ನೂರು ಶಿಕ್ಷಣಾಧಿಕಾರಿ

ರಾಣೇಬೆನ್ನೂರು, ಜು. 27- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲಾ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗ ಬಾರದು ಎಂದು ದಿ. 27ರಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿ ಹಾವೇರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.

ಅವರ ಆದೇಶವನ್ನು ಧಿಕ್ಕರಿಸಿ ಬಿಜೆಪಿ ಮುಖಂಡರ ಸುಪರ್ದಿಯಲ್ಲಿರುವ ಟ್ಯಾಗೋರ ಶಿಕ್ಷಣ ಸಂಸ್ಥೆ, ಕಾಂಗ್ರೆಸ್ ಮುಖಂಡರ ಸುಪರ್ದಿ ಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸಂಸ್ಥೆಯವರು ಇಂದು ತಮ್ಮ ಎಲ್ಲಾ ಹಂತದ ಶಾಲೆಗಳನ್ನು ಚಾಲು ಮಾಡಿದ್ದಾರೆಂದು ವಿಷಯ ತಿಳಿದ ಶಿಕ್ಷಣಾಧಿಕಾರಿ ಎಂ.ಹೆಚ್. ಪಾಟೀಲ ಅವರು, ಶಾಲೆಗೆ ತೆರಳಿ ಬಂದ್ ಮಾಡಿಸಿ, ಕಾರಣ ಕೇಳಿ ನೋಟಿಸ್ ನೀಡಿದ್ದಾರೆಂದು ಗೊತ್ತಾಗಿದೆ.

ದಿ. 27ರಂದು ಅಧಿಕ ಮಳೆ ಬರಲಿದ್ದು, ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂದು ಹಾವೇರಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಹಾಗೂ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ್ದರು.

ಪ್ರಿನ್ಸಿಪಾಲ್‌ಗೆ ಪ್ರಾಣ ಸಂಕಟ : ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸುವ ಇರಾದೆ ನನ್ನಲ್ಲಿಲ್ಲ. ಆದರೆ ಆಡಳಿತ ಮಂಡಳಿಯ ಆದೇಶ ಧಿಕ್ಕರಿಸಿದರೆ ನನ್ನ ಪ್ರಿನ್ಸಿಪಾಲ್ ಖುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮ್ಮದು ಎರಡು ದಂಡೆಯ ಮೇಲೆ ಹೆಜ್ಜೆ ಹಾಕಬೇಕಾದ ಪರಿಸ್ಥಿತಿ.  ನಾವು ಯಾವ ರೀತಿ ನೌಕರಿ ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎನ್ನುವ ಸಂಕಟ ಓರ್ವ ಪ್ರಿನ್ಸಿಪಾಲ್‌ರದ್ದು..

ಐ ವಿಲ್ ಫೇಸ್ : ನನಗೆ ಆಡಳಿತ ಮಂಡಳಿ ಹೇಳಿದೆ. ನಾನು ಸ್ಕೂಲ್ ಪ್ರಾರಂಭಿಸಿದ್ದೇನೆ. ಜಿಲ್ಲಾಧಿಕಾರಿಗಳ ಕ್ರಮ ಏನೇ ಇರಲಿ ಅದನ್ನು ಎದುರಿಸುತ್ತೇನೆ ಎಂದು ಇನ್ನೊಬ್ಬ ಪ್ರಿನ್ಸಿಪಾಲ್ ಉದ್ಧಟತನದಿಂದ ಮಾತನಾಡಿದರೆಂದು ಹೇಳಲಾಗಿದ್ದು, ಪ್ರಿನ್ಸಿಪಾಲ್ ವರ್ತನೆ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಲೇ, ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಹಾಗೂ ನಿರ್ದೇಶಕರಿಬ್ಬರು ಆಗಮಿಸಿ, ಪ್ರಿನ್ಸಿಪಾಲ್ ಪರವಾಗಿ ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತೆಂದು ತಿಳಿದು ಬಂದಿದೆ.

ಇನ್ನು ಕೆಲ ಖಾಸಗಿ ಶಾಲೆಗಳು ಪಾಠ ಪ್ರಾರಂಭಿಸಿದ್ದವೆಂದು, ಮೇಲಿನ ಎರಡೂ ಶಾಲೆಗಳಿಗೆ ಅಧಿಕಾರಿಗಳು ತೆರಳಿ ನೋಟಿಸ್‌ ನೀಡಿದ್ದನ್ನು ಅರಿತು ಇನ್ನಿತರರು ಎಚ್ಚೆತ್ತು ಮಕ್ಕಳನ್ನು ಮನೆಗೆ ಕಳುಹಿಸಿದರೆಂದು ತಿಳಿದು ಬಂದಿದೆ.

error: Content is protected !!