ಚಿನ್ನದ ಪದಕ ಮುಡಿಗೇರಿಸಿಕೊಂಡ ಸುಶ್ರುತ್ ಸಾಧನೆ ಅಮೋಘವಾದುದು

ಚಿನ್ನದ ಪದಕ ಮುಡಿಗೇರಿಸಿಕೊಂಡ  ಸುಶ್ರುತ್ ಸಾಧನೆ ಅಮೋಘವಾದುದು

ದಾವಣಗೆರೆ, ಜು. 27- ಅಂತರರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿರುವ ಸಂವೇದ ವಿಶೇಷ ಶಾಲೆ ವಿದ್ಯಾರ್ಥಿ ಎಂ.ಎಸ್. ಸುಶ್ರುತ್ ಸಾಧನೆ ಅಮೋಘವಾದುದು ಎಂದು ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ.ಜಿ.ಡಿ. ರಾಘವನ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಸಂವೇದ ತರಬೇತಿ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪೆಷಲ್ ಓಲಂಪಿಕ್ ಸಮ್ಮರ್ ವರ್ಲ್ಡ್ ಗೇಮ್ಸ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದ ನಗರದ ಸಂವೇದ ಶಾಲೆಯ ವಿದ್ಯಾರ್ಥಿ ಎಂ.ಎಸ್. ಸುಶ್ರುತ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋಚ್ ದಾದಾಪೀರ್ ಅವರ ಗರಡಿಯಲ್ಲಿ ಪಳಗಿದ ಸಂವೇದ ವಿಶೇಷ ಶಾಲೆಯ ಮಕ್ಕಳು ಇನ್ನೂ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಚಿನ್ನದ ಪದಕ ಪಡೆದು ದೇಶ, ರಾಜ್ಯ, ನಗರಕ್ಕೆ, ಶಾಲೆಗೆ ಕೀರ್ತಿ ತರುವಂತೆ ಶುಭ ಹಾರೈಸಿದರು. ಆರೋಗ್ಯ ಇಲಾಖೆಯಿಂದ ನೀಡಬಹುದಾದ ಸಹಾಯ, ಸಹಕಾರ, ಬೆಂಬಲ ನೀಡಲು ಸದಾ ಸಿದ್ದ ಎಂದ ಅವರು, ಸಂವೇದ ವಿಶೇಷ ಶಾಲೆಯ ಕಾರ್ಯ ಚಟುವಟಿಕೆಗಳು ಶ್ಲ್ಯಾಘನೀಯ ಎಂದು ಹೇಳಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ.ಕೆ. ಪ್ರಕಾಶ್  ಮಾತನಾಡಿ, ಬೌದ್ಧಿಕ ಅಸಮರ್ಥತೆಯುಳ್ಳ ಮಕ್ಕಳ ಬಗ್ಗೆ ಪೋಷಕರಲ್ಲಿ ಕೀಳರಿಮೆ ಬೇಡ. ಅವರನ್ನು ಸಮಾನ ದೃಷ್ಟಿಯಿಂದ ನೋಡುವ ಮೂಲಕ ವಿಶೇಷ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ವಿಶೇಷ ಚೇತನ ಮಕ್ಕಳಲ್ಲಿ ಕೌಶಲ್ಯಗಳನ್ನು ಬೆಳೆಸುವ ಮೂಲಕ ಸಮರ್ಥರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಸಂವೇದ ವಿಶೇಷ ಶಾಲೆ ಕೆಲಸ ಮಾಡುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ವಿಶೇಷ ಚೇತನ ಮಕ್ಕಳ ಉದ್ಯಾನವನ ನಿರ್ಮಾಣ, ವಿಶೇಷ ಚೇತನರ ಪೋಷಕರ ಸಂಘ ರಚನೆ ಮಾಡುವ ಉದ್ದೇಶ ಹೊಂದಲಾಗಿದೆ. ಸಂವೇದ ಶಾಲೆಗೆ ಇಲಾಖೆಯಿಂದ ಸಿಗಬಹುದಾದ ಅನುದಾನ ಪಡೆಯುವಂತೆ ತಿಳಿಸಿದರು.

ಇದೇ ವೇಳೆ ಅಂತರರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದು ಕೀರ್ತಿ ತಂದಿರುವ ಎಂ.ಎಸ್. ಸುಶ್ರುತ್  ಹಾಗೂ ಅವರ ತಂದೆ-ತಾಯಿಯನ್ನು ಸಂವೇದ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಸರ್.ಎಂ.ವಿ. ಪಿಯು ಕಾಲೇಜಿನ ಕಾರ್ಯದರ್ಶಿ ಎಸ್.ಜಿ. ಶ್ರೀಧರ್, ಬಾಪೂಜಿ ಆಸ್ಪತ್ರೆ ಮನೋರೋಗ ತಜ್ಞರಾದ ಡಾ.ಎಂ. ಅನುಪಮ, ಸಿಆರ್‌ಸಿ ನಿರ್ದೇಶಕ ಮಾರುತಿ ಕೃಷ್ಣೇಗೌಡ, ಡಾ. ಕಿರಣ್, ಕೋಚ್ ದಾದಾಪೀರ್  ಮತ್ತಿತರರು ಉಪಸ್ಥಿತರಿದ್ದರು.

ಸಂವೇದ ಶಾಲಾ ಮಕ್ಕಳು ಪ್ರಾರ್ಥಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂವೇದ ವಿಶೇಷ ಶಾಲಾ ಕಾರ್ಯದರ್ಶಿ ಡಾ. ಸುರೇಂದ್ರನಾಥ ಪಿ. ನಿಶಾನಿಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್. ನಾಗರಾಜ್ ಸನ್ಮಾನಿತರ ಪರಿಚಯಿಸಿದರು. 

error: Content is protected !!