ಸೈನಿಕರ ತ್ಯಾಗ, ಬಲಿದಾನವೇ ನಮ್ಮ ನೆಮ್ಮದಿಗೆ ಕಾರಣ

ಸೈನಿಕರ ತ್ಯಾಗ, ಬಲಿದಾನವೇ ನಮ್ಮ ನೆಮ್ಮದಿಗೆ ಕಾರಣ

ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಕಾಗಿನೆಲೆ ಸ್ವಾಮೀಜಿ

ಮಲೇಬೆನ್ನೂರು, ಜು.26- ಬೆಳ್ಳೂಡಿಯ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯಲ್ಲಿ ಬುಧವಾರ `ಕಾರ್ಗಿಲ್ ವಿಜಯ ದಿವಸ್’ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶೌರ್ಯ, ಸಾಹಸ, ಪ್ರಾಣ ತ್ಯಾಗ ಮಾಡಿ ದೇಶ ರಕ್ಷಿಸಿದ ಸೈನಿಕರಿಗೆ ಗೌರವ ನಮನ ಸಲ್ಲಿಸಿ ಅವರ ಸಾಹಸವನ್ನು ವಿದ್ಯಾರ್ಥಿಗಳಿಗೆ ನೆನಪಿಸಿಕೊಡಲಾಯಿತು. 

ಶ್ರೀ ನಿರಂಜನಾನಂದಪುರಿ ಸ್ವಾಮೀಜಿ  ಅವರು ಬೆಂಗಳೂರಿನಿಂದ ಲೈವ್ ನಲ್ಲಿ ಮಾತನಾಡಿ, ಇಂದು ನಾವೆಲ್ಲ ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿದ್ದೇವೆ ಎಂದರೆ, ಅದಕ್ಕೆ ನಮ್ಮ ವೀರ ಸೈನಿಕರ ತ್ಯಾಗ, ಬಲಿದಾನ, ಕಠಿಣ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡಾಗ ಅವರ ತ್ಯಾಗ, ಬಲಿದಾನಗಳು ಸಾರ್ಥಕವೆನಿಸುತ್ತವೆ ಎಂದು ಸ್ವಾಮೀಜಿ ಹೇಳಿದರು.

ಚಂದ್ರಗುಪ್ತ ಮೌರ್ಯ ಶಾಲೆಯ ಕಾರ್ಯದರ್ಶಿ ಎಸ್. ನಿಂಗಪ್ಪ ಮಾತನಾಡಿ, ಮೈ ಕೊರೆವ ಚಳಿಯಲ್ಲಿ ರಕ್ತ ಹೆಪ್ಪುಗಟ್ಟಿಸುವ ಹಿಮದ ರಾಶಿಯ ನಡುವೆ ವೀರಾವೇಷದಿಂದ ಹೋರಾಡಿ ಮಾತೃಭೂಮಿಗಾಗಿ ಮಣ್ಣಲ್ಲಿ ಮಣ್ಣಾದ ಸಾವಿರಾರು ಸೈನಿಕರು ನಮಗೆ ಆದರ್ಶವಾಗಿದ್ದಾರೆ. ನಮ್ಮ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ದೇಶ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.

ಶಾಲೆಯ ಶೈಕ್ಷಣಿಕ  ನಿರ್ದೇಶಕರೂ ಆದ ಪ್ರಾಂಶುಪಾಲರಾದ  ಡಾ. ಶೃತಿ ಇನಾಮ್‌ದಾರ್ ಮಾತನಾಡಿ, ಸೈನಿಕರು ಶಿಸ್ತು, ಸಮಯ ಪಾಲನೆಯೊಂದಿಗೆ ರಾಷ್ಟ್ರ ಪ್ರೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ರಾಷ್ಟ್ರ ಅಭಿಮಾನ ಇರುವ ಉದ್ದೇಶದಿಂದ ನಮ್ಮ ಸೈನಿಕರು ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಗಡಿ ಕಾಯುವ ಮೂಲಕ ರಾಷ್ಟ್ರವನ್ನು ಶತ್ರುಗಳಿಂದ ಕಾಪಾಡುತ್ತಾರೆ. 

ಹಾಗಾಗಿ ನಮ್ಮ ಶಾಲೆಯಲ್ಲಿಯೂ ಶಿಸ್ತು ಮತ್ತು ಶುಚಿಗೆ ಬಹಳ ಮಹತ್ವ ನೀಡಿದ್ದೇವೆ. ನಮ್ಮ ಶಾಲೆಯಲ್ಲಿಯೂ ವಿದ್ಯಾರ್ಥಿಗಳ ದೃಷ್ಟಿಯಿಂದ ಭಾರತ್ ಸ್ಕೌಟ್ ಅಂಡ್ ಗೈಡ್  ಪ್ರಾರಂಭ ಮಾಡಿದ್ದೇವೆ. ಮುಂದೆ  ಎನ್.ಸಿ.ಸಿ. ತರುವ ಉದ್ದೇಶವಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ಜವಾಬ್ದಾರಿ ಉಂಟಾಗಲು ಪ್ರಮುಖ ಕಾರಣವಾಗಿರುತ್ತದೆ ಎಂದು ಹೇಳಿದರು.

error: Content is protected !!