ಹರಪನಹಳ್ಳಿ, ಜು.26- ಶಾಲಾ ಶಿಕ್ಷಕರನ್ನು ಬಿ.ಎಲ್.ಓ ಕಾರ್ಯದಿಂದ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ, ತಹಶೀಲ್ದಾರರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಂ. ಆಂಜನೇಯ ಮಾತನಾಡಿ, ವೃತ್ತಿಯಲ್ಲಿ ಶಿಕ್ಷಕರಾದ ನಾವು, ನಮ್ಮ ಇಲಾಖೆಯ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಹೆಚ್ಚಾಗಿ ಕೆಲಸದ ಒತ್ತಡದಲ್ಲಿರುತ್ತೇವೆ ಬಿ.ಎಲ್.ಓ ಕಾರ್ಯನಿರ್ವ ಹಿಸುವುದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಆಗುತ್ತಿಲ್ಲ. ಈಗಾಗಲೇ ಸರ್ವೋಚ್ಚ ನ್ಯಾಯಲಯವು ಶಿಕ್ಷಕರನ್ನು ಬೋಧನೆಗೆ ಮಾತ್ರ ತೊಡಗಿಸಲು ಆದೇಶ ಮಾಡಿರುತ್ತದೆ.
ಇತ್ತೀಚಿಗೆ ಮಾಧ್ಯಮಗಳಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಶಿಕ್ಷಕರನ್ನು ಬಿ.ಎಲ್.ಓ ಕಾರ್ಯಕ್ಕೆ ನಿಯೋಜಿಸಬಾರದೆಂದು ತಿಳಿಸಿರುತ್ತಾರೆ. ಅಲ್ಲದೇ ಪೋಷಕರಿಂದ ಶಾಲಾ ಕರ್ತವ್ಯದಲ್ಲಿ ಶಿಕ್ಷಕರು ಸರಿಯಾಗಿ ಇರುತ್ತಿಲ್ಲವೆಂದು ದೂರುತ್ತಿದ್ದಾರೆ. ಈ ಕಾರ್ಯಕ್ಕೆ ಇತರೆ ಇಲಾಖೆಯವರನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ. ಶಿಕ್ಷಕರನ್ನು ಅನ್ಯ ಕಾರ್ಯಗಳಿಂದ ಮುಕ್ತಗೊಳಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಪಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಕೊಟ್ರಯ್ಯ, ಸಂಘಟನಾ ಕಾರ್ಯದರ್ಶಿ ಮಂಜಪ್ಪ ಪಿ., ಶಿಕ್ಷಕರಾದ ಎಚ್.ಬಿ. ಚಂದ್ರಪ್ಪ, ಡಿ. ಮಲ್ಲಿಕಾರ್ಜುನ್, ಎಚ್.ಪಿ. ಚಂದ್ರಪ್ಪ, ಸಂಗಯ್ಯ, ಅಸ್ಲಾಂ ಬಾಷಾ, ಅರುಣಕುಮಾರ್, ರಮೇಶ್ ಎಚ್, ರೇಣುಕಾ, ಚಂದ್ರಮ್ಮ, ಆನಂದ್ ಎನ್, ಮಲ್ಲಿಕಾರ್ಜುನ್.ಪಿ, ಆರ್.ಎಸ್. ಮಂಜುನಾಥ್, ಮೂರ್ತಿನಾಯ್ಕ ಸೇರಿದಂತೆ ಇತರರು ಇದ್ದರು.