ದಾವಣಗೆರೆ, ಜು. 26- ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡುವಂತೆ ನೀರಾವರಿ ನಿಗಮದ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದರು.
ನಗರದಲ್ಲಿ 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಸಭೆಯ ವತಿಯಿಂದ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸಿ, ಎಲ್ಲಾ ಕೆರೆಗಳಿಗೆ 120 ದಿನವಾದರೂ ನೀರು ತುಂಬಿಸ ಬೇಕು. ವಿದ್ಯುತ್ ಕೊರತೆಯಾಗದಂತೆ ನಿರ್ವಹಣೆ ಮಾಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದಿನ ಬಜೆಟ್‌ನಲ್ಲಿ ಹೊಸ ಪೈಪ್‌ಲೈನ್ ಅಳವಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಿರಿಗೆರೆ ಜಗದ್ಗುರುಗಳ ಮಾರ್ಗದರ್ಶನದೊಂದಿಗೆ ಮಂಜೂರಾತಿ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ನೂತನ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಮಾತನಾಡಿ, ವಿದ್ಯುಚ್ಛಕ್ತಿ ಬಿಲ್ಲಿನ ನಿಗದಿತ ಪ್ರತಿ ತಿಂಗಳಿಗೆ ಕನಿಷ್ಠ ಮೊತ್ತವಾದ ಇಪ್ಪತ್ತು ಲಕ್ಷ ರೂ.ಗಳಂತೆ ವಾರ್ಷಿಕ ಎರಡು ಕೋಟಿ 40 ಲಕ್ಷ ವಿನಾಕಾರಣ ನಿಗಮಕ್ಕೆ ಹೊರೆ ಆಗುವುದನ್ನು ತಪ್ಪಿಸಲು ಸೂಕ್ತ ಮಾರ್ಗೋಪಾಯವನ್ನು ಹೇಳಿದರು.
ನಿಗಮದ ಇಂಜಿನಿಯರ್‌ಗಳಿಗೆ ಹಾಗೂ ಗುತ್ತಿಗೆದಾರರ ಮೇಲೆ ಸರಿಯಾಗಿ ಉಸ್ತುವಾರಿ ಮಾಡಿ, ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕೆಂದು ಆಗ್ರಹಿಸಿದ ಅವರು, ಕೊಡಗನೂರು ಕೆರೆಗೆ ಹೋಗುವ ಪೈಪ್‌ಲೈನ್ ಮಾರ್ಗ ಬದಲಾಯಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಲ್. ಕೊಟ್ರೇಶ್‌ನಾಯ್ಕ ಹುಲಿಕಟ್ಟೆ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಣ್ಣ, ಕಿತ್ತೂರು ವೀರಣ್ಣ, ಕಂದನಕೋವಿ ನಿಜಲಿಂಗಪ್ಪ, ರೇವಣಸಿದ್ಧಪ್ಪ, ಕಾರ್ಯದರ್ಶಿಗಳಾದ ಶಿವಕುಮಾರ್ ತುಪ್ಪದಹಳ್ಳಿ, ನರೇಂದ್ರಬಾಬು ಹೆಬ್ಬಾಳು, ಚಂದ್ರನಾಯ್ಕ ಹಾಲೇಕಲ್ಲು, ಹೆಮ್ಮನಬೇತೂರು ತಿಪ್ಪೇಸ್ವಾಮಿ, ಸಿದ್ಧನೂರು ಮಂಜಣ್ಣ, ಗುರುಸ್ವಾಮಿ, ಮುನಿಯಪ್ಪ, ಮಲ್ಲೇಶಪ್ಪ ಆನಗೋಡು, ಸಿದ್ಧರಾಮೇಶ್, ಬೇತೂರು ಪ್ರಕಾಶ್, ಎಂ. ವಿಶ್ವನಾಥ್, ದೇವೇಂದ್ರಪ್ಪ ಕಂದನಕೋವಿ, ಮಾಲಾನಾಯ್ಕ ಹೊನ್ನೂರು ಗೊಲ್ಲರಹಟ್ಟಿ, ಸಣ್ಣಗೌಡರು ಕರಿಬಸಪ್ಪ, ಶಿವಣ್ಣ, ಹೇಮಂತರಾಜ್, ರಾಜಾನಾಯ್ಕ, ಶಂಭುಲಿಂಗಪ್ಪ ಗುಮ್ಮನೂರು, ಡಿ.ಟಿ. ಹನುಮಂತಪ್ಪ ಐಗೂರು ಹಾಗೂ 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತ ಮುಖಂಡರು ಭಾಗವಹಿಸಿದ್ದರು.