ನಾಯಕತ್ವದ ಮನೋವೃತ್ತಿ ಇದ್ದವರಿಗೆ ಮಾತ್ರ ಸೈನಿಕ ವೃತ್ತಿ

ನಾಯಕತ್ವದ ಮನೋವೃತ್ತಿ ಇದ್ದವರಿಗೆ ಮಾತ್ರ ಸೈನಿಕ ವೃತ್ತಿ

ರಕ್ಷಣಾ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಕ್ಯಾಪ್ಟನ್‌ ನವೀನ್ ನಾಗಪ್ಪ ಅಣಬೇರು

ದಾವಣಗೆರೆ, ಜು. 26 – ಕಂಠಪಾಠ ಮಾಡಿದ ಪಾಠಗಳಿಂದ ಸೈನಿಕ ಅಧಿಕಾರಿಗಳಾ ಗಲು ಸಾಧ್ಯವಿಲ್ಲ. ಸೈನಿಕ ಅಧಿಕಾರಿಗಳಾಗಲು ಬಯಸುವವರಿಗೆ ನಾಯಕತ್ವದ ಗುಣ ಹಾಗೂ ಕ್ಷಣಾರ್ಧದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಬೇಕು ಎಂದು ರಕ್ಷಣಾ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಕ್ಯಾಪ್ಟನ್ ನವೀನ್ ನಾಗಪ್ಪ ಅಣಬೇರು ಹೇಳಿದರು.

ನಗರದ ಬಿ.ಐ.ಇ.ಟಿ.ಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸೈನ್ಯದ ಅಧಿಕಾರಿಯಾಗಿ ಆಯ್ಕೆಯಾಗಲು `ಸೇವೆಗಳ ಆಯ್ಕೆ ಮಂಡಳಿ’ (ಎಸ್.ಎಸ್.ಬಿ.) ಪರೀಕ್ಷೆ ನಡೆಸಲಾಗುತ್ತದೆ. ತಮಾಷೆಯಾಗಿ ಇದನ್ನು `ಸೇವೆಗಳ ತಿರಸ್ಕಾರ ಮಂಡಳಿ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಅರ್ಜಿ ಹಾಕುವ ಸಾಕಷ್ಟು ಜನರು ತಿರಸ್ಕೃತರಾಗುತ್ತಾರೆ ಎಂದು ನವೀನ್ ನಾಗಪ್ಪ ತಿಳಿಸಿದರು.

ಸೈನಿಕ ಅಧಿಕಾರಿಗಳನ್ನು ಆಯ್ಕೆ ಮಾಡುವಾಗ ನಾಯಕತ್ವ ಗುಣ ಹಾಗೂ ಕ್ಷಣಾರ್ಧ ದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರಿಗಣಿಸಲಾಗು ತ್ತದೆ. ಏಕೆಂದರೆ, ಯುದ್ಧ ಭೂಮಿಯಲ್ಲಿ ಗುಂಡು – ಬಾಂಬುಗಳು ಸಿಡಿಯುವಾಗ ಗಿಳಿಪಾಠಗಳು ಉಪ ಯೋಗಕ್ಕೆ ಬರುವುದಿಲ್ಲ ಎಂದವರು ಹೇಳಿದರು.

ಸೈನ್ಯದ ಅಧಿಕಾರಿ ನೇಮಕದ ಸಂದರ್ಭದಲ್ಲಿ ಮನೋವೈದ್ಯರೂ ಇರುತ್ತಾರೆ. ಇವರು ಅಭ್ಯರ್ಥಿಗಳು ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆಯೇ ಹೊರತು, ಟ್ರೈನಿಂಗ್ ಸಂಸ್ಥೆಗಳಲ್ಲಿ ಕಲಿತು ಬಂದು ನೀಡುವ ಉತ್ತರಗಳಿಗೆ ಮಣೆ ಹಾಕುವುದಿಲ್ಲ ಎಂದರು.

24 ವರ್ಷಗಳ ಹಿಂದೆ ಸಣ್ಣ ವಯಸ್ಸಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ತಮ್ಮ ಅನುಭವ ಹಂಚಿಕೊಂಡ ಅವರು, ಯುದ್ಧದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ಎಂಟು ಶಸ್ತ್ರಚಿಕಿತ್ಸೆಗೆ ಒಳಗಾಗಿ 21 ತಿಂಗಳ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು ಎಂದರು.

ನನ್ನ ತಂಡದ ಸಾಹಸದಿಂದ ಕಾರ್ಗಿಲ್‍ನ ಪಾಯಿಂಟ್‌ 4875 ಬೆಟ್ಟದ ಮೇಲೆ ತ್ರಿವರ್ಣ ಧ್ವಜ ಹಾರುವಂತಾಯಿತು. ಆ ಸಾಹಸಗಾಥೆ ಜೀವನದಲ್ಲಿ ಸಾರ್ಥಕ ಭಾವ ತರುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಭಾರತ ದೇಶ ಮುಂದುವರೆಯುವುದನ್ನು ಸಹಿಸದವರು ದೇಶ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಪ್ರಯತ್ನಗಳ ಬಗ್ಗೆ ಸತರ್ಕವಾಗಿರಬೇಕು ಎಂದು ಹೇಳಿದರು.

ವೇದಿಕೆಯ ಮೇಲೆ ಕಾಲೇಜಿನ ಪ್ರಾಂಶು ಪಾಲ ಹೆಚ್.ಬಿ. ಅರವಿಂದ, ಉಪನ್ಯಾಸಕರಾದ ಕೆ.ಎಸ್. ಬಸವರಾಜಪ್ಪ, ಶಂಕರಮೂರ್ತಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಅಂಕಿತ ಪ್ರಾರ್ಥಿಸಿದರು. ಸ್ಫೂರ್ತಿ ಸ್ವಾಗತಿಸಿದರೆ, ಮಧು ದೇಶಭಕ್ತಿ ಗೀತೆ ಹಾಡಿದರು.

error: Content is protected !!