ದಾವಣಗೆರೆ ಹುಡುಗರು ಅಭಿನಯಿಸಿದ `ಡೈಮಂಡ್‌ ಕ್ರಾಸ್‌’

ದಾವಣಗೆರೆ ಹುಡುಗರು ಅಭಿನಯಿಸಿದ `ಡೈಮಂಡ್‌ ಕ್ರಾಸ್‌’

ದಾವಣಗೆರೆ, ಜು. 25- ಸೈಬರ್‌ ಕ್ರೈಂ ಕುರಿತಾದ  `ಡೈಮಂಡ್‌ ಕ್ರಾಸ್‌’ ಚಲನಚಿತ್ರ ನಾಡಿದ್ದು ದಿನಾಂಕ 28ರ ಶುಕ್ರವಾರ ರಾಜ್ಯದ 100 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ರಾಮ್‌ ದೀಪ್‌ ತಿಳಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರದ ವಿಶೇಷತೆಯೆಂದರೆ ದಾವಣಗೆರೆಯ ಸುಮಾರು 25ಕ್ಕೂ ಹೆಚ್ಚು ಹುಡುಗರು ನಟಿಸಿರುವುದು, ಇದೊಂದು ವಿಭಿನ್ನ ಕಥೆಯಾಗಿದೆ. 12 ವರ್ಷದ ಕೆಳಗೆ ದಿನಗೂಲಿ ಕಾರ್ಮಿಕರ ಮಕ್ಕಳು  ಯಾರ ಸಹಾಯವಿಲ್ಲದೇ ಫೈಟಿಂಗ್ ಕಲಿತು ಹಳೇಯ ರೈಸ್‌ ಮಿಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಇದನ್ನು ಗಮನಿಸಿದ ದಾವಣಗೆರೆಯ ಆರ್‌.ಟಿ. ಅರುಣ್‌ಕುಮಾರ್ ಈ ಹುಡುಗರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನನಗೆ ತಿಳಿಸಿದರು. ಆ ಎಲ್ಲಾ ಯುವಕರನ್ನು ಹಾಕಿಕೊಂಡು `ಡೈಮಂಡ್‌ ಕ್ರಾಸ್‌’ ಚಿತ್ರ ನಿರ್ಮಾಣ ಮಾಡಲಾಗಿದೆ. ಸೈಬರ್‌ ಹ್ಯಾಂಕಿಗ್‌ ಕುರಿತ ಚಿತ್ರ ಇದಾಗಿದೆ. ಏಳೆಂಟು ರೈಲುಗಳು ಒಂದೇ ಕ್ರಾಸ್‌ನಲ್ಲಿ ಒಟ್ಟಿಗೆ ಸಾಗಿದಾಗ ಹೇಗೆ ಡೈಮಂಡ್‌ ರೂಪ ತಾಳುತ್ತದೆಯೋ ಹಾಗೆಯೇ ಅದರ ಆಧಾರದಲ್ಲಿ ಸಾಗುವ ಕಥೆಯೇ `ಡೈಮಂಡ್‌ ಕ್ರಾಸ್‌ ಚಿತ್ರ ಎಂದರು. 

ಚಿತ್ರದ ನಾಯಕ ಸ್ವಾರ್ಥಿಯಾಗಿದ್ದಾಗ ಜೀವನದಲ್ಲಿ ಚೆನ್ನಾಗಿರುತ್ತಾನೆ. ಆದರೆ ಎಲ್ಲರಿಗೂ ಒಳ್ಳೆಯದು ಮಾಡಲು ಹೋದಾಗ ಹೇಗೆ ಕಷ್ಟಗಳನ್ನು ಅನುಭವಿಸುತ್ತಾನೆ ಎನ್ನುವುದೇ ಕಥಾ ಹಂದರ. ಮುಖ್ಯವಾಗಿ ಚಿತ್ರದಲ್ಲಿ ಎಲ್ಲಿಯೂ ಡೂಪ್‌ ಬಳಸಿಲ್ಲ, ಎಲ್ಲರೂ  ನೈಜವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಕಥೆಯೇ ಹೀರೋ. ಬಹುತೇಕ ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.

ನಾಯಕ ರಜತ್ ಅಣ್ಣಪ್ಪ ಮಾತನಾಡಿ, ರಾಜ್ಯಾದ್ಯಂತ ದಾವಣಗೆರೆ ಹುಡುಗರ ಚಿತ್ರ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ಅವಕಾಶ ಹುಡುಕುತ್ತಿದ್ದ ವೇಳೆ ಆರ್.ಟಿ. ಅರುಣ್‌ಕುಮಾರ್‌ ಸಹಾಯ ಮಾಡಿದ್ದಾರೆ. ನಾವು 20 ಹುಡುಗರು ಚಿತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಆಕ್ಷನ್‌ ಚಿತ್ರ ಇದಾಗಿದ್ದು, ಉತ್ತಮವಾಗಿ ಮೂಡಿಬಂದಿದೆ. ಚಿತ್ರಕ್ಕೆ ಜನರ ಸಹಕಾರ ಬೇಕಾಗಿದೆ ಎಂದರು. 

ನಾಯಕಿ ರೂಪಿಕಾ ಮಾತನಾಡಿ, ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಛಲ, ತಾಳ್ಮೆ ಇದ್ದರೆ ಏನೂಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ `ಡೈಮಂಡ್‌ ಕ್ರಾಸ್‌’ ಉತ್ತಮ ನಿದರ್ಶನ ಎಂದರು. 

ಕಲಾ ಪ್ರೋತ್ಸಾಹಕ ಅರುಣ್‌ ಕುಮಾರ್‌ ಮಾತನಾಡಿ, ಇದೊಂದು ವಿಭಿನ್ನ ಕಥೆ, ಇಂದು ಕಂಪ್ಯೂಟರ್‌ಗಳೇ ಗನ್‌ ಇದ್ದಂತೆ, ಪಾಸ್‌ ವರ್ಡ್‌ಗಳೇ ಬುಲೆಟ್‌ ಆಗಿರುವ ಪರಿಸ್ಥಿತಿ ಇದೆ. ಈ ಆಧಾರದಲ್ಲಿ ಸೈಬರ್‌ ಕ್ರೈಂ ಕುರಿತು ಚಿತ್ರ ರೂಪಿಸಲಾಗಿದೆ. ದಾವಣ ಗೆರೆಯ ತ್ರಿನೇತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಮನೀಷ್‌ ಮೆಹ್ತಾ, ಚಿತ್ರಕಥೆ ಸಂಭಾಷಣೆ ಬರೆದ ರಾಮಚಂದ್ರ ಬಾಬು, ಕೆ.ಮನು, ರೋಹಿತ್‌ ಉಪಸ್ಥಿತರಿದ್ದರು.

error: Content is protected !!