ಸಂಕಲ್ಪ ಸಕಾರಾತ್ಮಕ, ದೃಢವಾಗಿರಲಿ : ಶಾರದೇಶಾನಂದ ಶ್ರೀ

ಸಂಕಲ್ಪ ಸಕಾರಾತ್ಮಕ, ದೃಢವಾಗಿರಲಿ : ಶಾರದೇಶಾನಂದ ಶ್ರೀ

ದಾವಣಗೆರೆ, ಜು. 25- ನಾವು ಮಾಡುವ ಸಂಕಲ್ಪ ಶಕ್ತಿಯುತ, ಸತ್ವಯುತ, ಸಕಾರಾತ್ಮಕ ವಾಗಿರಬೇಕು ಮತ್ತು  ದೃಢವಾಗಿರಬೇಕು. ಸಂಕಲ್ಪ ಆದರ್ಶಪ್ರಾಯವಾಗಿದ್ದು ಇನ್ನೊಬ್ಬರಿಗೆ ಸ್ಫೂರ್ತಿ ನೀಡುವಂತಿರಬೇಕು ಎಂದು ಹರಿಹರ ರಾಮಕೃಷ್ಣಾಶ್ರಮದ ಶ್ರೀ ಶಾರದೇಶಾನಂದ ಸ್ವಾಮೀಜಿ ಹಿತ ನುಡಿದರು.

ನಗರದ ವಿದ್ಯಾಸಾಗರ ಕಾನ್ವೆಂಟ್ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಸಂಕಲ್ಪ ದಿನಾಚರಣೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಕಲ್ಪ ಅತ್ಯಂತ ಶಕ್ತಿಯುತ ಮತ್ತು ಸತ್ವಯುತ. ವಿದ್ಯಾರ್ಥಿಗಳು ಓದಿನ ಜೊತೆಗೆ ಆರೋಗ್ಯ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಸಂಕಲ್ಪದಿಂದ ಸಾಧನೆ ಸಾಧ್ಯ. ಸಣ್ಣ ಸಣ್ಣ ಸಂಕಲ್ಪಗಳನ್ನು ಮಾಡುತ್ತಾ ದೊಡ್ಡ ದೊಡ್ಡ ಸಂಕಲ್ಪಗಳನ್ನು ಮಾಡಿಕೊಳ್ಳಬೇಕು. ತನ್ಮೂಲಕ ದೊಡ್ಡ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ಹೇಳಿದರು.

ಗುರಿ ಮುಟ್ಟುವ ಜೊತೆಗೆ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಕೀಳರಿಮೆ ಬೆಳೆಸಿಕೊಳ್ಳದೆ, ಇನ್ನೊಬ್ಬರಿಗೆ ಕಿರಿಕಿರಿ ಉಂಟು ಮಾಡದೇ, ಜೀವನದಲ್ಲಿ ಜಾಗೃತರಾಗಿ ಮುನ್ನಡೆಯಬೇಕಾಗಿದೆ.  ವಿದ್ಯಾರ್ಥಿಗಳು ನಿಂತು ಓದುವುದನ್ನು ರೂಢಿಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಎಸ್.ಎಸ್. ವೈದ್ಯಕೀಯ ಮಹಾವಿದ್ಯಾ ಲಯ ಹಾಗೂ ಸಂಶೋಧನಾ ಕೇಂದ್ರದ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ ಮಾತನಾಡಿ, ಜೀವನದಲ್ಲಿ ಒಳ್ಳೆಯತನ ರೂಢಿಸಿಕೊಳ್ಳಬೇಕು. ಗುರಿಯನ್ನು ಮುಖ್ಯವಾಗಿರಿಸಿಕೊಂಡು ಮುನ್ನಡೆದರೆ ಯಶಸ್ಸು ಕಾಣಲು ಸಾಧ್ಯವಿದೆ ಎಂದರು.

ಪ್ರಾಮಾಣಿಕ ಪ್ರಯತ್ನ, ಸತತ ಪರಿಶ್ರಮದಿಂದ ಸಂಕಲ್ಪ ಈಡೇರಲು ಸಾಧ್ಯವಿದೆ. ಶಾಲೆಯಲ್ಲಿ ಓದಿದ್ದನ್ನು ಚನ್ನಾಗಿ ಮನನ ಮಾಡಿಕೊಳ್ಳಬೇಕು. ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು.

ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಬೇಕು. ಯಾವುದೂ ಅಸಾಧ್ಯವಲ್ಲ. ಸಾಧ್ಯವಾಗಿಸಿಕೊಳ್ಳುವ ನಿಟ್ಟಿನಲ್ಲಿ ಗುರಿ ಇರಲಿ ಎಂದು ಹಿತ ನುಡಿದರು.

ವಿದ್ಯಾಸಾಗರ ಶಾಲಾ ಸಂಸ್ಥಾಪಕ ಭರತ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಕಲ್ಪದ ಜೊತೆಗೆ ಸುಂದರ ಬದುಕು ಕಟ್ಟಿಕೊಳ್ಳಬೇಕು. ಪ್ರಾಮಾಣಿಕ ಪ್ರಯತ್ನದಿಂದ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.

ಕಾರ್ಯದರ್ಶಿ ಸತ್ಯವತಿ ಭರತ್‌ಸಿಂಗ್ ಮಾತನಾಡಿದರು. ಆಡಳಿತಾಧಿಕಾರಿ ವಿಶ್ವಜಿತ್ ಸಿಂಗ್, ಮುಖ್ಯ ಶಿಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.

6 ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜ್ಞಾನ ಶಿಕ್ಷಕಿ ಆಶಾ ಸ್ವಾಗತಿಸಿದರು. ರಶ್ಮಿ ಜೋಷಿ ವಂದಿಸಿದರು. ವಿದ್ಯಾರ್ಥಿಗಳಿಗೆ ಶ್ರೀ ಶಾರದೇಶಾನಂದ ಸ್ವಾಮೀಜಿ `ಸಂಕಲ್ಪ ವಿಧಿ’ ಬೋಧಿಸಿದರು.

error: Content is protected !!