ಮಹಿಳೆಯರ ರಕ್ಷಣೆಯಲ್ಲಿ ಮೋದಿ ಸರ್ಕಾರ ವಿಫಲ

ಮಹಿಳೆಯರ ರಕ್ಷಣೆಯಲ್ಲಿ ಮೋದಿ ಸರ್ಕಾರ ವಿಫಲ

ಹೊನ್ನಾಳಿ, ಜು. 25 – ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಸೇರಿದಂತೆ ದೇಶದಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯಗಳ ಬೆತ್ತಲೆ ಮೆರವಣಿಗೆ, ಅತ್ಯಾಚಾರಗಳು ನಡೆಯುತ್ತಿದ್ದರೂ ಕೂಡ  ಮಹಿಳೆಯರ ರಕ್ಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರಜಾ  ಪರಿವರ್ತನ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ ಹೇಳಿದರು.

ಮಂಗಳವಾರ  ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲ್ಲೂಕು ಕಛೇರಿವರೆಗೆ ಪ್ರಜಾ ಪರಿವರ್ತನ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಮಹಿಳೆಯರ ಬೆತ್ತಲೆ ಮೆರವಣಿಗೆ, ಶಿವಮೊಗ್ಗದಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಧರ್ಮಸ್ಥಳ ಮತ್ತು ಗುಲ್ಬರ್ಗದಲ್ಲಿ ಬಾಲಕಿಯರ ಅತ್ಯಾಚಾರ  ಮತ್ತು ಕೊಲೆ ಮಾಡಿರುವುದನ್ನು ಖಂಡಿಸಿ, ಪ್ರತಿಭಟನೆ ನಡೆಸಿ, ರಾಷ್ಟ್ರಪತಿವರಿಗೆ ತಲುಪುವಂತೆ ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಮಣಿಪುರದ ಕುಕಿ ಸಮುದಾಯದ ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆ ಗೊಳಿಸಿ ಅತ್ಯಾಚಾರವೆಸಗಿರುವುದು ಅತ್ಯಂತ ಖಂಡನೀಯ ಹಾಗೂ ಇಡೀ ನಾಗರೀಕ ಸಮಾಜ ತಲೆತೆಗ್ಗಿಸುವಂತಾಗಿದೆ ಎಂದರು. 

ಅಲ್ಲಿನ ರಾಜ್ಯ ಸರ್ಕಾರ ಘಟನೆ ತಡೆದು ನಿಯಂತ್ರಿಸಲು  ಸಂಪೂರ್ಣ ವಿಫಲವಾಗಿದೆ, ಸರ್ಕಾರ ಗುಲಾಮ ಕೊರರ  ಪರವಾಗಿ ಮೃದುಧೋರಣೆ ತೋರುತ್ತಿದ್ದು ಕೂಡಲೇ ಮಣಿಪುರದ ಸರ್ಕಾರವನ್ನು ವಜಾಗೊಳಿ ಸಬೇಕು ಎಂದು ರಾಜ್ಯ ಮತ್ತು ತಾಲ್ಲೂಕು ಘಟಕ ಒತ್ತಾಯಿಸುತ್ತದೆ  ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆ ಕೇವಲ ಘೋಷಣೆಗಳಾಗಿವೆ ಅನುಷ್ಠಾನಗೊಂಡಿಲ್ಲ. ಮಣಿಪುರದಲ್ಲಿ ಸುಮಾರು 75 ದಿನಗಳು ಕಳೆದರೂ ಪ್ರಧಾನಿ ನರೇಂದ್ರ ಮೋದಿ ಸ್ಥಳಕ್ಕೆ ಭೇಟಿ ನೀಡುವ ಸೌಜನ್ಯ ತೋರಿಲ್ಲ.  ಅವರು ಕಲ್ಲು ಹೃದಯದ ಪ್ರಧಾನಿ. ದೇಶದ ಆಂತರಿಕ ಘಟನೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದರು.

ಧರ್ಮಸ್ಥಳದಲ್ಲಿ ನಡೆದ ಬಾಲಕಿ ಅತ್ಯಾ ಚಾರ ಘಟನೆ ತುಂಬಾ ಅಮಾನೀಯವಾಗಿದ್ದು ಕೊಲೆ ಮಾಡಿರುವ ಅಪರಾಧಿಗಳನ್ನು ಬಂಧಿಸಬೇಕು, ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಕ್ರೈಸ್ತ ಪಾದ್ರಿಯನ್ನು ಮತ್ತು ಗುಲ್ಬರ್ಗದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಪರಾಧಿಗಳನ್ನು ಅತ್ಯಂತ ಉಗ್ರವಾಗಿ ಶಿಕ್ಷಿಸಬೇಕು ಎಂದು ತಮ್ಮ ವೇದಿಕೆ ಆಗ್ರಹಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಜಾ ಪರಿವರ್ತನ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಕೃಷ್ಣ ಅರಕೆರೆ, ತಾಲ್ಲೂಕು ಅಧ್ಯಕ್ಷ ಕೆ.ಓ. ಹನುಮಂತಪ್ಪ, ರೇಣುಕಮ್ಮ ಮಾತನಾಡಿದರು.

ಪ್ರತಿಭಟನೆಯಲ್ಲಿ ಎನ್.ಲೋಕೇಶ್, ಪಕೀರಪ್ಪ, ಶಿವಮೂರ್ತಿ, ಹೇಮಮ್ಮ,  ಗೌರಮ್ಮ,  ಇರ್ಫಾನ್ ಭಾಷಾ,  ಜೀವನ್, ಮಂಜು, ರೇಣುಕ, ಜಗದೀಶ್ ಕವಿತ ಮಹೇಶ್, ತಿಪ್ಪೇಶ್ ಆಶಾ, ಮೀನಾಕ್ಷಮ್ಮ, ಲತಾ ಸೇರಿದಂತೆ ಇತರರು ಇದ್ದರು. 

error: Content is protected !!