ಅರಣ್ಯ ಪೋಷಣೆ ಎಲ್ಲರ ಮೂಲಭೂತ ಕರ್ತವ್ಯವಾಗಲಿ

ಅರಣ್ಯ ಪೋಷಣೆ ಎಲ್ಲರ ಮೂಲಭೂತ ಕರ್ತವ್ಯವಾಗಲಿ

ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ. ಹೆಚ್. ದೇವರಾಜ್ ಕರೆ

ದಾವಣಗೆರೆ, ಜು. 24- ಸುತ್ತಮುತ್ತಲಿನ ಪರಿಸರ ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾದಾಗ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಅರಣ್ಯ ಪೋಷಣೆ ಮೂಲಭೂತ ಕರ್ತವ್ಯವಾಗಬೇಕಾಗಿದೆ ಎಂದು  ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್. ದೇವರಾಜ್ ಹೇಳಿದರು.

ಹೊನ್ನಾಳಿ ತಾಲ್ಲೂಕು ಯಕ್ಕನಹಳ್ಳಿ ಗ್ರಾಮದಲ್ಲಿ ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್‌ ಹಾಗೂ ಯಕ್ಕನಹಳ್ಳಿ ಎಸ್‌ಡಿಎಂಸಿ ವತಿಯಿಂದ ಇಂದು ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಾದ ನಾವುಗಳು ಮೂಲಭೂತ ಕರ್ತವ್ಯ ನಿರ್ವಹಿಸಿದಾಗ ಮೂಲಭೂತ ಹಕ್ಕುಗಳು ತನ್ನಿಂತಾನೆ ಅನು ಷ್ಠಾನಗೊಳ್ಳುತ್ತವೆ. ಅತಿ ಹೆಚ್ಚು ಅರಣ್ಯ ಪ್ರದೇಶಗಳನ್ನೊಳಗೊಂಡ ರಾಷ್ಟ್ರಗಳಲ್ಲಿ ಭಾರತ 10 ನೇ ಸ್ಥಾನದಲ್ಲಿದೆ ಎಂದರು.

ಭಾರತದಲ್ಲಿರುವ ಅರಣ್ಯ ಪ್ರದೇಶ 8.02 ಲಕ್ಷ ಚದುರ ಕಿ.ಮೀ. ಇದು ದೇಶದ ಒಟ್ಟು ಭೂ ಭಾಗದ ಶೇ. 24 ರಷ್ಟು ಎಂದು ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ. ವಾಸ್ತವದಲ್ಲಿ ಇಷ್ಟು ಅರಣ್ಯ ಪ್ರದೇಶವಿಲ್ಲ ಎಂದು ಪರಿಸರ ತಜ್ಞರು ಹೇಳುತ್ತಾರೆ. 

ನಮ್ಮ ದೇಶ ಅಮೇರಿಕಾಕ್ಕಿಂತ ಮೂರು ಪಟ್ಟು ಸಣ್ಣದು, ಆದರೆ ಇಲ್ಲಿ ಅಮೇರಿಕಾಕ್ಕಿಂತ 4 ಪಟ್ಟು ಹೆಚ್ಚು ಜನರಿ ದ್ದಾರೆ. ಅರಣ್ಯ ಪ್ರದೇಶವು ಅಮೇರಿಕಾಕ್ಕಿಂತ 4 ಪಟ್ಟು ಕಡಿಮೆ ಯಿದೆ. ಅತಿ ಹೆಚ್ಚು ಅರಣ್ಯ ಹೊಂದಿರುವ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಮರ ಗಿಡಗಳನ್ನು ಬೆಳೆಸುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ, ಸಾರ್ವಜನಿಕರ ಸಹಭಾಗಿತ್ವ, ಅದರ ಜೊತೆ ಸಂಘ- ಸಂಸ್ಥೆಗಳ ಸಹಭಾಗಿತ್ವ ಕೂಡ ಅತ್ಯಂತ ಪ್ರಮುಖವಾದುದು ಎಂದು ತಿಳಿಸಿದರು.

ಸಂಘ- ಸಂಸ್ಥೆಗಳು ಮರ ಗಿಡಗಳನ್ನು ಬಂದು ನೆಡಬಹುದು. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಗ್ರಾಮಸ್ಥರ ಜವಾಬ್ದಾರಿಯಾಗಿರುತ್ತದೆ ಎಂದರು. 

ಇರುವ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವಲ್ಲಿಯೂ ಕೂಡ ನಾವು ಎಡವುತ್ತಿದ್ದೇವೆ. ಕಾಡನ್ನು ನಾಶ ಮಾಡುತ್ತಿರುವುದರಿಂದ ಕಾಡು ಮೃಗಗಳು ಹಳ್ಳಿಗಳತ್ತ ನುಗ್ಗುತ್ತಿವೆ. ಇದರ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.

ಯಕ್ಕನಹಳ್ಳಿಯ ಗುಡ್ದದ ರಸ್ತೆ ಹಾಗೂ ಹೊಸದಾಗಿ ನಿರ್ಮಾಣಗೊಂಡಿರುವ ಕೆರೆ ಏರಿಯ ಮೇಲೆ ಸುಮಾರು 150 ಕ್ಕೂ ಹೆಚ್ಚು ಮಹಾಘನಿ ಸಸಿಗಳನ್ನು ನೆಡಲಾಯಿತು. ಸರ್ಕಾರಿ ಶಾಲಾ ಆವರಣದಲ್ಲಿ ಉತ್ತಮ ತಳಿಯ 50 ಕ್ಕೂ ಹೆಚ್ಚು ಹೂವು ಹಾಗೂ ಹಣ್ಣಿನ ಗಿಡಗಳನ್ನು ನಡೆಲಾಯಿತು. 

ಇದೇ ಸಂದರ್ಭದಲ್ಲಿ ಯಕ್ಕನಹಳ್ಳಿಯ ಬಡ ಮಹಿಳೆ ಸುನೀತಾ ಕೆ.ಎಸ್.ಅಶೋಕ ಇವರಿಗೆ ಲಯನ್ಸ್ ಕ್ಲಬ್ ವತಿಯಿಂದ ಹೊಲಿಗೆ ಯಂತ್ರವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್. ದೇವರಾಜ್ ಕೊಡುಗೆಯಾಗಿ ನೀಡಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ  ಎಸ್.ಓಂಕಾರಪ್ಪ, ವಲಯ ಅಧ್ಯಕ್ಷ ದಿಳ್ಳೆಪ್ಪ, ಲಯನ್ಸ್ ಮಾಜಿ ಗೌರ್ನರ್ ಹೆಚ್.ಎನ್. ಶಿವಕುಮಾರ್, ಲಯನ್ಸ್ ಕಾರ್ಯದರ್ಶಿ ಜಿ.ಎನ್.ಹೆಚ್.ಕುಮಾರ್. ಖಜಾಂಚಿ ಶೀತಲ್‍ಕುಮಾರ್. ಸದಸ್ಯರಾದ ಶಿವಶಂಕರ್, ಲಯನ್ ಓ.ಜಿ.ರುದ್ರಗೌಡ್ರು, ಆಸರೆ ಕ್ಲಬ್ ಮೌನೇಶ್, ಲಯನ್ ಸಿರಿಗೆರೆ ಸಿದ್ದಣ್ಣ, ಮಹಾಲಿಂಗಪ್ಪ. ಲಯನ್ ಗಿರೀಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಕೊಟ್ರೇಶ್, ಮುಖಂಡರಾದ ಟಿ.ಎಸ್.ಜಗದೀಶ್,ಸಿ.ವಿ.ವಾಸುದೇವ್, ಸಿ.ಪರಮೇಶ್, ಸಿ.ಬಿ.ನಾಗರಾಜ್, ಶಿವಕುಮಾರಸ್ವಾಮಿ, ಗಡ್ಲವರ ತಿಪ್ಪಣ್ಣ, ಮಹಾದೇವಸ್ವಾಮಿ, ಸಿ.ಎನ್. ಬಸವರಾಜ್, ಸಿ.ಬಿ.ಬಸವರಾಜ್ ಸೇರಿದಂತೆ ಇತರರು ವನಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

error: Content is protected !!