ಗೃಹಲಕ್ಷ್ಮಿ ಯೋಜನೆ ಸ್ತ್ರೀಯರು ಆರ್ಥಿಕವಾಗಿ ಸದೃಢವಾಗುವ ಅವಕಾಶ

ಗೃಹಲಕ್ಷ್ಮಿ ಯೋಜನೆ ಸ್ತ್ರೀಯರು ಆರ್ಥಿಕವಾಗಿ ಸದೃಢವಾಗುವ ಅವಕಾಶ

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಜು.24- ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂಲಕ ಆರ್ಥಿಕವಾಗಿ ಮಹಿಳೆಯರು ಸದೃಢರಾಗಲು ಆವಕಾಶ  ಕಲ್ಪಿಸಿದೆ ಎಂದು ಶಾಸಕರಾದ  ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಕ್ಕೆ ತೆರಿಗೆ ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ. ರಾಜ್ಯದಲ್ಲಿ 1.28 ಕೋಟಿ ಮಹಿಳಾ ಪಲಾನುಭವಿಗಳಿದ್ದು, 36 ಸಾವಿರ ಕೋಟಿ ರೂ. ಅನುದಾನವನ್ನು ಈ ವರ್ಷ ಕಾಯ್ದಿರಿಸಲಾಗಿದೆ. 

ಕೆಲವರು ನೋಂದಣಿ ಮಾಡಿಸಲು ಹಣವನ್ನು ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಯಾರಿಗೂ, ಯಾವ ಕಾರಣಕ್ಕೂ ಹಣ ನೀಡಬಾರದೆಂದು ಅವರು ಸೂಚಿಸಿದರು.

ಈ ಯೋಜನೆಯಲ್ಲಿ ಅರ್ಜಿ ಹಾಕಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಅಗತ್ಯವಿದ್ದು, ನೊಂದಣಿಗೆ ಯಾವುದೇ ಗಡುವು ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಇನ್ನೊಂದು ಯುವ ನಿಧಿಯನ್ನು ಅಕ್ಟೋಬರ್‍ನಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಪಟ್ಟಣದಲ್ಲಿ ಪುರಸಭಾ ವತಿಯಿಂದ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧ, ಪುರಸಭಾ ಕಚೇರಿ, ಹಾಗೂ ಹುಲ್ಲುಗರಡಿಕೇರಿಯ ಸಮುದಾಯ ಭವನ ಹೀಗೆ ಮೂರು ಕಡೆ ನೊಂದಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಂಕೇತೀಕವಾಗಿ ಕೆಲ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ನೊಂದಣಿ ಪತ್ರ ವಿತರಿಸಿದರು.

ತಹಶೀಲ್ದಾರ್ ಡಾ.ಶಿವಕುಮಾರ ಬಿರಾದಾರ್, ತಾ.ಪಂ. ಇಒ ಕೆ.ಆರ್.ಪ್ರಕಾಶ್, ಪುರಸಭಾ ಸದಸ್ಯರಾದ ನಿಟ್ಟೂರು ಭೀಮವ್ವ ಸಣ್ಣಹಾಲಪ್ಪ, ಎಂ.ವಿ.ಅಂಜಿನಪ್ಪ, ಡಿ.ಅಬ್ದುಲ್ ರೆಹಮಾನ್, ಲಾಟಿ ದಾದಾಪೀರ್, ಉದ್ದಾರ ಗಣೇಶ್, ಮುಖಂಡರಾದ ವೈ.ಕೆ.ಬಿ.ದುರುಗಪ್ಪ, ಹುಲಿಕಟ್ಟಿ ಚಂದ್ರಪ್ಪ, ಗುಡಿ ನಾಗರಾಜ, ಚಿಕ್ಕೇರಿ ಬಸಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!