`ಅಜಾತ ಶತ್ರು ಎ.ಆರ್.ಉಜ್ಜನಪ್ಪ’ ಗೆ ನುಡಿ ನಮನ

`ಅಜಾತ ಶತ್ರು ಎ.ಆರ್.ಉಜ್ಜನಪ್ಪ’ ಗೆ ನುಡಿ ನಮನ

ದಾವಣಗೆರೆ, ಜು.23- ಸ್ನೇಹಪರ ಜೀವಿ, ಅಜಾತಶತ್ರು ಎ.ಆರ್. ಉಜ್ಜನಪ್ಪ ಅವರಿಗೆ ಅವರೇ ಸಾಟಿ, ಸರ್ವರನ್ನೂ ಒಗ್ಗೂಡಿಸಿಕೊಂಡುವ ಹೋಗುವ ಅವರ ಸ್ವಭಾವ ಇತರರಿಗೆ ಮಾದರಿ. ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ `ಮಾಣಿಕ್ಯ’ದ ರೂಪದಲ್ಲಿ ಕಂಗೊಳಿಸುತ್ತಿದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಬಣ್ಣಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರೂ, ಲಯನ್ಸ್ ರಾಜ್ಯಪಾಲರೂ ಆಗಿದ್ದ ಎ.ಆರ್.ಉಜ್ಜನಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ಗೆ ಮಾರ್ಗದರ್ಶಕ ರಾಗಿದ್ದರು. ಅವರಲ್ಲಿದ್ದ ಹೊಂದಾಣಿಕೆ ಗುಣ ಎಲ್ಲರಿಗೂ ಇಷ್ಟವಾಗಿತ್ತು. ಅವರ ಹೆಸರು ಶಾಶ್ವ ತವಾಗಿ ಉಳಿಯುವಂತಹ ಕೆಲಸವನ್ನು ಮಾಡಲು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾ ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಕುವೆಂಪು ಕನ್ನಡ ಭವನ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನೇಕ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಯಶಸ್ಸು ಕಂಡವರು. ಏನೇ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ಮರೆತು ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆಯುವ ಗುಣ ಅವರದು ಎಂದು ತಿಳಿಸಿದರು.

ಹಿರಿಯ ಪತ್ರಕರ್ತರೂ, ಸಾಹಿತಿಯೂ ಆದ ಬಾ.ಮ. ಬಸವರಾಜಯ್ಯ ಮಾತನಾಡಿ, ಅತ್ಯುತ್ತಮ ಸಂಘಟಕರಾಗಿದ್ದ ಉಜ್ಜನಪ್ಪ ಅವರು ನಾನು ಅಕ್ಕಪಕ್ಕದ ಗ್ರಾಮದವರಾಗಿದ್ದು, ಅವರೊಟ್ಟಿಗೆ ಕಸಾಪ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಅವರೊಬ್ಬ ಅಜಾತಶತ್ರು, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೇ ಮಾನವೀಯ ಗುಣಗಳನ್ನು ರೂಢಿಸಿಕೊಂಡಿದ್ದರು. ಅವರದು ಅಪರೂಪದ ವ್ಯಕ್ತಿತ್ವ ಎಂದು ಹೇಳಿದರು.

ಕವಿ ಲೋಕೇಶ್ ಅಗಸನಕಟ್ಟೆ ಮಾತನಾಡಿ, ಸರ್ಕಾರಿ ನೌಕರರಾಗಿದ್ದ ಉಜ್ಜನಪ್ಪ ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಬಹುದು ಎಂಬುದನ್ನು ತೋರಿಸಿಕೊಟ್ಟವರು. ಅವರೊಬ್ಬ ಸಮರ್ಥ ಆಡಳಿತಗಾರರಾಗಿದ್ದರು ಎಂದರು.

ಸಾಹಿತಿ ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಉಜ್ಜನಪ್ಪ ಅವರು ಜಿಲ್ಲಾ ಕನ್ನಡ ಭವನ ಕಟ್ಟುವ ಜೊತೆಗೆ, ಕನ್ನಡದ ಮನಸ್ಸುಗಳನ್ನು ಕಟ್ಟಿದರು. ಚುನಾವಣಾ ನಿರ್ವಹಣೆಯ ಕಾರ್ಯಗಳ ಕೌಶಲ್ಯವನ್ನು ಹೊಂದಿದ್ದರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಉಜ್ಜನಪ್ಪ ಅವರು ನಿವೃತ್ತಿ ನಂತರವೂ ಸಹ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡವರು. ವಿವಿಧ ಸಂಘಟನೆಗಳಲ್ಲಿ ಲವಲವಿಕೆಯಿಂದ ಕೆಲಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು. ಯಾವುದೇ ಕೆಲಸವಿರಲಿ ಸಾಧಿಸದೇ ಬಿಡುತ್ತಿರಲಿಲ್ಲ. ಮನುಷ್ಯ ಸಂಬಂಧವನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದವರು ಎಂದು ಬಣ್ಣಿಸಿದರು.

ಹರಪನಹಳ್ಳಿಯ ಹೆಚ್. ಮಲ್ಲಿಕಾರ್ಜುನ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಉಜ್ಜನಪ್ಪ ಮಾಡದ ಸೇವಾ ಕ್ಷೇತ್ರಗಳಿಲ್ಲ. ಅವರೊಬ್ಬ ಅತ್ಯುತ್ತಮ ಸಂಘಟಕರಾಗಿದ್ದರು ಎಂದು ನುಡಿ ನಮನ ಸಲ್ಲಿಸಿದರು.

ಜಗಳೂರಿನ ಸುಭಾಶ್ಚಂದ್ರ ಬೋಸ್ ಮಾತನಾಡಿ, ಉಜ್ಜನಪ್ಪ ಅವರೊಬ್ಬ ಹಠವಾದಿ. ಹಿಡಿದ ಕೆಲಸವನ್ನು ಸಾಧಿಸದೇ ಬಿಡುತ್ತಿರಲಿಲ್ಲ. ಅವರೊಬ್ಬ ಸಂಘಜೀವಿ. ಎಲ್ಲರೊಳಗೊಂದಾಗಿ ಬದುಕು ಸವೆಸಿದವರು ಎಂದು ಮೆಚ್ಚುಗೆ ಮಾತುಗಳನ್ನಾಡಿದರು. 

ಹಿರಿಯ ಪತ್ರಿಕಾ ಛಾಯಾಗ್ರಹಕ ಹೆಚ್.ಬಿ. ಮಂಜುನಾಥ್, ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಮಂಜುನಾಥ ಕುರ್ಕಿ, ಹೆಚ್.ಎನ್. ಶಿವಕುಮಾರ್, ಸಿ.ಆರ್. ಮರುಳಪ್ಪ, ಸುಮತಿ ಜಯಪ್ಪ, ಸಿ. ಕೆಂಚನಗೌಡ್ರು, ರೇವಣಸಿದ್ಧಪ್ಪ ಅಂಗಡಿ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎ. ಮಹಾಲಿಂಗಪ್ಪ, ಡಾ. ದಾದಾಪೀರ್ ನವಿಲೇಹಾಳ್, ಸಿ.ಹೆಚ್. ದೇವರಾಜ್, ಸಿ.ಜಿ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಕೆ. ರಾಘವೇಂದ್ರ ನಾಯರಿ, ಬಿ. ದಿಳ್ಳೆಪ್ಪ, ರುದ್ರಾಕ್ಷಿಬಾಯಿ, ಬೇತೂರು ಷಡಾಕ್ಷರಪ್ಪ, ಭೈರೇಶ್, ಪರಮೇಶ್ವರಪ್ಪ ದಾಗಿನಕಟ್ಟಿ, ಸಿರಿಗೆರೆ ನಾಗರಾಜ್, ಆರ್.ಎ. ಸಿದ್ದೇಶಪ್ಪ, ಕೆ.ಪಿ. ಮರಿಯಾಚಾರ್, ಪಂಕಜಾಕ್ಷಿ, ಶಿವಬಸಮ್ಮ, ಶಶಿರೇಖಾ, ಕೊಟ್ರಪ್ಪ, ಜ್ಯೋತಿ ಉಪಾಧ್ಯಾಯ, ಎಲ್.ಜಿ. ಮಧುಸೂದನ್ ಚನ್ನಗಿರಿ, ಜಿ.ಆರ್. ನಾಗರಾಜ್, ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!