ದಾವಣಗೆರೆ,ಜು.23- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಟನೆಯನ್ನು ದುರ್ಬಲಗೊಳಿಸುವ ದುರುದ್ಧೇಶದಿಂದ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರ ವಿರುದ್ದ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ವೀರೇಶ್ ಎಸ್.ಒಡೆನಪುರ ಮತ್ತು ಕಾರ್ಯದರ್ಶಿ ಸಿ.ಗುರುಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಸಂಘಟನೆ ವಿರೋಧಿಗಳಾದ ಐದು ಜನ ನೌಕರರು ಸಂಘದ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿರುವುದು ವಿಷಾದದ ಸಂಗತಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನೌಕರರ ಹಿತರಕ್ಷಣೆಗಾಗಿ ಹಗಲಿರುವ ಶ್ರಮಿಸುತ್ತಿರುವ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಅಲ್ಲದೇ ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ಹಾನಿ ಮಾಡಿರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿ ಗಳನ್ನು ನೇಮಿಸುವಂತೆ ಸುಳ್ಳು ದೂರು ನೀಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತೇಜೋವಧೆ ಮಾಡಿರುವ ಮತ್ತು ಸಂಘಟನೆಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ನೌಕರರಾದ ಶಾಂತಾರಾಮ, ಗುರುಸ್ವಾಮಿ, ಎಂ.ಮೆಹಬೂಬ್ ಬಾಷಾ, ವಿ.ವಿ. ಶಿವರುದ್ರಯ್ಯ ಮತ್ತು ನಿಂಗೇಗೌಡ್ರು ಅವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ತಿಪ್ಪೇಸ್ವಾಮಿ ಬಿ ಆರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ದಳವಾಯಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು