ಸ್ವಗ್ರಾಮದಲ್ಲಿ ಸ್ವತಃ ಚಾಲನೆ ಮಾಡಿ ಸರ್ಕಾರಿ ಬಸ್ ಉದ್ಘಾಟಿಸಿದ ಶಾಸಕ ಬಸವರಾಜು ವಿ. ಶಿವಗಂಗಾ
ಚನ್ನಗಿರಿ, ಜು. 17- ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇನೆ. ದಾವಣಗೆರೆ ಹಾಗೂ ಸಂತೇಬೆನ್ನೂರಿಗೆ ತೆರಳಲು ಸರ್ಕಾರಿ ಬಸ್ ಇಲ್ಲದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ಶಾಲಾ-ಕಾಲೇಜ್‌ಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನಾನುಕೂಲವಿದ್ದ ಕಾರಣ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಹಿರೇಕೋಗಲೂರು ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ ಅವರು ಮಾತನಾಡಿದರು.
ಸ್ವಗ್ರಾಮದಲ್ಲಿ ಸ್ವತಃ ಡ್ರೈವಿಂಗ್ ಮಾಡಿ ಚಾಲನೆ ನೀಡಿದ ಬಸವರಾಜು ವಿ. ಶಿವಗಂಗಾ, ಈ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕರಿಗೆ ಗ್ರಾಮಸ್ಥರು ಸರ್ಕಾರಿ ಬಸ್ ಕಲ್ಪಿಸಬೇಕೆಂದು ಮನವಿ ಮಾಡಿದ್ದರು. ಅದರಂತೆ ಇಂದು ಗ್ರಾಮದಲ್ಲಿ ಸರ್ಕಾರಿ ಬಸ್‌ಗೆ ಚಾಲನೆ ನೀಡಲಾಗಿದೆ. ತಾಲ್ಲೂಕಿನ ಇನ್ನೂ ಹಲವು ಹಳ್ಳಿಗಳಿಗೆ ಬಸ್ ಸೌಲಭ್ಯ ಇಲ್ಲ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಬಸ್ ಬರುವುದರಿಂದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ ಎಂದರು.
ಗ್ರಾಮಕ್ಕೆ ಸರ್ಕಾರಿ ಬಸ್ ಬರುತ್ತಿದ್ದಂತೆ ಜನರು ಬಸ್ ಗೆ ಸಿಂಗಾರ ಮಾಡಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.