ದಾವಣಗೆರೆ, ಜು. 17 – ನಗರದ ಎಸ್‍ಓಜಿ ಕಾಲೋನಿಯ ದಲಿತ ಕೇರಿಗಳಿಗೆ ನಗರ ಡಿವೈಎಸ್ ಮಲ್ಲೇಶ್ ದೊಡ್ಡಮನಿ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ವಿಚಾರಿಸಿ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಸ್‍ಓಜಿ ಕಾಲೋನಿಯಿಂದ ಆಟೋದಲ್ಲಿ ನಗರಕ್ಕೆ ಪ್ರಯಾಣ ಮಾಡುವ ಶಾಲಾ ಮಕ್ಕಳು ಸಂಚರಿಸುವ ಸಂದರ್ಭದಲ್ಲಿ ಪುಂಡರು ತೊಂದರೆ ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸ್‍ಓಜಿ ಕಾಲೋನಿಯ ಆಟೋ ನಿಲ್ದಾಣದಲ್ಲಿ ಬಳಿ ಮುಚ್ಚಿರುವ ಪೊಲೀಸ್ ಚೌಕಿಯಲ್ಲಿ ನಾಳೆಯಿಂದ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.
ನಂತರ ಅದೇ ಮಾರ್ಗದಲ್ಲಿರುವ ನಗರ ಸಾರಿಗೆ ನಿಲ್ದಾಣದ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾತ್ರಿ ವೇಳೆ ಪುಂಡರ ಕಾಟಕ್ಕೆ ಕಡಿವಾಣ ಹಾಕಲು ಎಸ್‍ಓಜಿ ಕಾಲೋನಿಗೆ ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿ ಆನಂದ್ ಅವರನ್ನು ನೇಮಿಸಲಾಗಿದೆ ಎಂದರು. ಬಡಾವಣೆಯ ಎಲ್ಲಾ ಮುಖ್ಯ ರಸ್ತೆಗಳ ಸಂಚರಿಸಿ ಸಾರ್ವಜನಿಕರಿಗೆ ಹೆಚ್ಚಿನ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಎಎಸ್‍ಐ ಹೊನ್ನೂರು ಸಾಬ್, ವಿದ್ಯಾನಗರ ಪಿಸಿಗಳಾದ ಮಂಜು, ಸಿದ್ದೇಶ್, ಎಸ್‍ಓಜಿ ಕಾಲೋನಿಯ
ಡಿಎಸ್‍ಎಸ್ ಮುಖಂಡರಾದ ಹೆಚ್. ತಿಮ್ಮಣ್ಣ, ಬಿ. ಕಲ್ಲೇಶಪ್ಪ, ಅಶೋಕ, ಮಲ್ಲಿಕಾರ್ಜುನ ಸ್ವಾಮಿ ಇನ್ನಿತರರು ಹಾಜರಿದ್ದರು.