ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ
ಹರಪನಹಳ್ಳಿ, ಜು. 17- ಸಮಾಜದಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ವಕೀಲ ವೃತ್ತಿಯೂ ಸಹ ಇತ್ತೀಚೆಗೆ ಜಟಿಲವಾಗುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಹರಿಹರ ತಾಲ್ಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ದಾವಣಗೆರೆ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದ ವಕೀಲರುಗಳಿಗೆ ಸಮಾಜದ ಸಂಘಟನೆ ಹಾಗೂ ಜಾಗೃತಿ ಅರಿವು ಕುರಿತು ಮಾತನಾಡಿದರು.
ವಕೀಲರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ವಾಲ್ಮೀಕಿ ನಾಯಕ ಸಮಾಜ ಬಂಧುಗಳು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ, ಶಿಕ್ಷಣ ಸೇರಿದಂತೆ ವಿವಿಧ ವಲಯಗಳಲ್ಲಿ ತೀರಾ ಹಿಂದುಳಿದಿದ್ದು, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಆಯಾ ಜಾತಿಗಳು ಜಾಗೃತರಾಗುತ್ತಿದ್ದು, ವಾಲ್ಮೀಕಿ ನಾಯಕ ಸಮಾಜದವರು ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಜಾಗೃತಿಯಾಗಬೇಕಿದೆ. ಶಿಕ್ಷಣ ಕಲಿತವರು ಮಠ ಹಾಗೂ ಸಮಾಜದ ಬಗ್ಗೆ ಗೌರವ ಇಟ್ಟುಕೊಳ್ಳುವ ಮೂಲಕ ಸಮಾಜ ನಮಗೆ ಏನು ಮಾಡಿದೆ ಎನ್ನುವ ಬದಲು, ನಾವು ಸಮಾಜಕ್ಕೆ ಏನು ಮಾಡಬೇಕು ಎಂಬ ಪರಿಕಲ್ಪನೆ ಇಟ್ಟುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ರಾಜ್ಯದ 4ನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ನಾಯಕ ಸಮಾಜವನ್ನು ಜಾಗೃತಿ ಮೂಡಿಸುವ ಉದ್ದೇಶದಿಂದ ವಾಲ್ಮೀಕಿ ಜಾತ್ರೆಯ ನೆಪದಲ್ಲಿ ರಾಜ್ಯದ 28 ಜಿಲ್ಲೆಗಳು ಹಾಗೂ 175 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಜಾತ್ರೆಗೆ ಆಹ್ವಾನ ನೀಡುವ ಮೂಲಕ ಸಂಘಟಿತರನ್ನಾಗಿ ಮಾಡುವ ಉದ್ದೇಶ ನಮಗಿದೆ ಎಂದರು.
ನಿವೃತ್ತ ಸರ್ಕಾರಿ ವಕೀಲರಾದ ಕೆ. ಚಂದ್ರಪ್ಪ, ವಕೀಲರುಗಳಾದ ಕೆ. ರಂಗಸ್ವಾಮಿ, ಕರಿಯಪ್ಪ ಹುಣಸೇಕಟ್ಟೆ, ಹೊನ್ನಪ್ಪ ಕೆರೆಯಾಗಳಹಳ್ಳಿ, ಹರಪನಹಳ್ಳಿಯ ಕೆ. ಉಚ್ಚೆಂಗೆಪ್ಪ, ಶಿವಕುಮಾರ ಹೂವಿನ ಮಡು, ಉಮಾಪತಿ ನವಿಲೇಹಾಳು, ಕೊಡಗನೂರು ಅಂಜಿನಪ್ಪ, ಕುಂದುವಾಡ ಚಿತ್ರಲಿಂಗಪ್ಪ, ತಳವಾರ ನಾಗರಾಜ ಸೇರಿದಂತೆ ಇತರರು ಇದ್ದರು.