ಕಸ ನಿರ್ವಹಣೆ ಎಲ್ಲರ ಹೊಣೆ

ಕಸ ನಿರ್ವಹಣೆ ಎಲ್ಲರ ಹೊಣೆ

ಹಸಿ ತ್ಯಾಜ್ಯ ನಿರ್ವಹಣೆ ಮತ್ತು ತಾರಸಿ ತೋಟ ಕಾರ್ಯಾಗಾರ ಉದ್ಘಾಟಿಸಿದ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್

ದಾವಣಗೆರೆ, ಜು.17- ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ನಿರ್ವಹಣೆ ಪ್ರತಿಯೊಬ್ಬರ ಹೊಣೆ. ಇದನ್ನು ಎಲ್ಲರೂ ಸಾಮೂಹಿಕವಾಗಿ ಅಳವಡಿಸಿಕೊಂಡಾಗ ಮಾತ್ರ ಸ್ಪಚ್ಛ ದಾವಣಗೆರೆ ಮಾಡಲು ಸಾಧ್ಯವೆಂದು ಮಹಾನಗರ ಪಾಲಿಕೆಯ ಮಾಜಿ ಮಹಾಪೌರ  ವೀರೇಶ್ ಎಸ್.ಟಿ. ಅಭಿಪ್ರಾಯಪಟ್ಟರು.

ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ 95ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ‘ಹಸಿ ತ್ಯಾಜ್ಯ ನಿರ್ವಹಣೆ ಮತ್ತು ತಾರಸಿ ತೋಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಒಟ್ಟು ಉತ್ಪತ್ತಿಯಾಗುವ ಕಸವನ್ನು ನಿರ್ವಹಣೆ ಮಾಡುವುದೇ ಸವಾಲಾಗಿರುವ ಈ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಇದನ್ನು ಸಂಸ್ಕರಿಸಿ ಬಳಸಿದರೆ ಕಸ ನಿರ್ವಹಣೆ ಸಾಧ್ಯವೆಂದರು.  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು,      ಮರ, ಗಿಡಗಳನ್ನು ಬೆಳೆಸಿ ಪೋಷಿಸಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಜಿ. ಬಸವನಗೌಡ, ದೇಶದಲ್ಲಿ ಇಂದು ಕೃಷಿಯಲ್ಲಿ ನಡೆಯುವ ಎಲ್ಲಾ ಸಂಶೋಧನೆ, ವಿಸ್ತರಣಾ ಚಟುವಟಿಕೆಗೆ ಮೂಲ ಭಾರತೀಯ ಕೃಷಿ ಅನುಸಂಧಾನ ಪರಿಷತ್.ಇದರ 95ನೇ ಸಂಸ್ಥಾಪನೆಯ ಅಂಗವಾಗಿ ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿರು ವುದು ಸ್ವಚ್ಛ ಭಾರತದೆಡೆಗೆ ನಾವು ಇಡುತ್ತಿರುವ ಹೆಜ್ಜೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ  ರಾಘವೇಂದ್ರ ಪ್ರಸಾದ್, ಇಲಾಖೆಯವತಿಯಿಂದ ಮುಂದಿನ ದಿನಗಳಲ್ಲಿ ಕೈತೋಟ ಮತ್ತು ತಾರಸಿ ತೋಟ ಕಾರ್ಯಕ್ರಮವನ್ನು ಹೆಚ್ಚಿನ ಮಟ್ಟದಲ್ಲಿ ಉತ್ತೇಜಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ಇಂದು ಭಾರತ ದೇಶ ಆಹಾರದಲ್ಲಿ ಸ್ವಾವಲಂಬಿಯಾಗಲು ಕೃಷಿ ಸಂಶೋಧನೆಗಳ ಕೊಡುಗೆ ಹೆಚ್ಚಿದೆ.  ಜೊತೆಗೆ ಸಂಶೋಧನೆಗಳು ರೈತರಿಗೆ ತಲುಪಿಸಲು ಕೃಷಿ ವಿಜ್ಞಾನ ಕೇಂದ್ರಗಳು ದೇಶಾದ್ಯಂತ ಶ್ರಮಿಸುತ್ತಿವೆ.  

ದೇಶದ ರೈತರಿಗೆ ಉತ್ತಮ ತಾಂತ್ರಿಕತೆ ಹಾಗೂ ಮಾರುಕಟ್ಟೆ ಕಲ್ಪಿಸುವಲ್ಲಿ ನಮ್ಮ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಶಾಂತಾಭಟ್, ಪರಿಸರ ತಜ್ಞರು, ಹಸಿ ಕಸ ತ್ಯಾಜ್ಯ ನಿರ್ವಹಣೆಯ ಪ್ರಾತ್ಯಕ್ಷಿತೆಯನ್ನು ತೋರಿಸಿ ಕೊಟ್ಟರೆ,      ಬಸವನಗೌಡ ಎಂ.ಜಿ. ತಾರಸಿ ತೋಟದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.

error: Content is protected !!