ಶಿಥಿಲವಾಗಿರುವ 60 ವರ್ಷಗಳ ಕಚೇರಿ ಹಾಗೂ ವಸತಿ ಗೃಹಗಳು
ದಾವಣಗೆರೆ, ಜು. 14 – ಅಗ್ನಿ ಮತ್ತಿತರೆ ಅವಘಡಗಳು ಸಂಭವಿಸಿದರೆ ನೆರವಿಗೆ ಬರುವ ಅಗ್ನಿಶಾಮಕ ದಳದ ಸಿಬ್ಬಂದಿಯ ನೆಲೆಯೇ ಭದ್ರವಿಲ್ಲ. ನಗರದಲ್ಲಿರುವ 60 ವರ್ಷಗಳ ಹಳೆಯ ಕಚೇರಿ ಹಾಗೂ ವಸತಿ ಗೃಹಗಳು ಸಂಪೂರ್ಣ ಶಿಥಿಲವಾಗಿದ್ದು, ತಾರಸಿಯೇ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಮಳೆ ಬಂದರೆ ನುಗ್ಗುವ ನೀರನ್ನು ಹೊರ ಹಾಕುವುದು ನಿರಂತರ ಸಾಹಸವಾಗಿದೆ.
1964ರ ಸಮಯದಲ್ಲಿ ನಿರ್ಮಿಸಲಾದ ಹಳೆಯ ಕಟ್ಟಡದಲ್ಲಿ ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತಿದೆ. 60 ವರ್ಷಗಳ ಹಳೆಯ ಕಚೇರಿ ಯಾವಾಗ ಕುಸಿದು ಬೀಳುತ್ತದೋ ಎಂಬ ದುಸ್ಥಿತಿಯಲ್ಲಿದೆ.
ವಸತಿ ಗೃಹಗಳ ಪರಿಸ್ಥಿತಿ ಇನ್ನೂ ಶೋಚನೀಯ. ಹಲವು ಮನೆಗಳು ಬದುಕುವುದಿರಲಿ, ಕಾಲಿಡಲೂ ಯೋಗ್ಯವಿಲ್ಲದೇ ಖಾಲಿ ಇವೆ. ಸಿಬ್ಬಂದಿ ಈಗ ನೆಲೆಸಿರುವ ಮನೆಗಳೂ ಯಾವ ದೃಷ್ಟಿಯಿಂದಲೂ ವಾಸ ಯೋಗ್ಯವಾಗಿ ಕಂಡು ಬರುತ್ತಿಲ್ಲ.
ಇದರಿಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಚೇರಿಯಲ್ಲಿದ್ದರೂ, ಮನೆಯಲ್ಲಿದ್ದರೂ ತಾರಸಿ ನೋಡುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಅಗ್ನಿಶಾಮಕ ದಳದ ಕೆಲಸವೇ ಒತ್ತಡದ್ದು. ಇದಾದ ನಂತರ ಮನೆಗೆ ಹೋದರೂ ನೆಮ್ಮದಿ ಸಿಗದ ಪರಿಸ್ಥಿತಿ ಇದೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.
ವಸತಿ ಗೃಹಗಳು ಎಷ್ಟು ಹದಗೆಟ್ಟಿವೆ ಎಂದರೆ, ರಿಪೇರಿ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸಂಬಂಧಿಗಳನ್ನು ಮನೆಗೆ ಕರೆಯಲೂ ಮುಜುಗರ ವಾಗುತ್ತದೆ. ಮನೆಗಳೂ ತೀರಾ ಚಿಕ್ಕವಿವೆ ಎಂದು ಇಲ್ಲಿ ನೆಲೆಸಿರುವ ಗೃಹಿಣಿಯೊಬ್ಬರು ತಮ್ಮ ಕಷ್ಟ ಹೇಳಿಕೊಂಡರು.
ಅಗ್ನಿಶಾಮಕ ದಳದ ಕೆಲಸ ತುರ್ತು ಸ್ವರೂಪದ್ದು. ಯಾವಾಗ ಕೆಲಸದ ಕರೆ ಬರುತ್ತದೋ ಗೊತ್ತಿರುವುದಿಲ್ಲ. ಹೀಗಾಗಿ ವಸತಿ ಗೃಹದಲ್ಲಿರುವುದೇ ಅನುಕೂಲ. ಅಲ್ಲದೇ, ಹೊರಗಡೆ ಬಾಡಿಗೆ ದುಬಾರಿಯಾಗಿದೆ. ಹೀಗಾಗಿ ಕಷ್ಟವಾದರೂ ಇಲ್ಲೇ ಮುಂದುವರೆಯುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಕರ್ತವ್ಯವೋ ರಕ್ಷಣೆಯೋ? : ವಲಯ – ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿ ಹಾಗೂ ವಸತಿ ಗೃಹಗಳಿರುವ 5 ಎಕರೆ ಪ್ರದೇಶವು ರಸ್ತೆಗಿಂತ ಒಂದು ಮೀಟರ್‌ನಷ್ಟು ತಗ್ಗಿನಲ್ಲಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿಗೆ ನೀರು ನುಗ್ಗುವ ಅಪಾಯ ಇದೆ.
2013 ಹಾಗೂ 2017ರಲ್ಲಿ ಭಾರೀ ಮಳೆಯಿಂದಾಗಿ ಈ ಪ್ರದೇಶ 4-5 ಅಡಿ ಜಲಾವೃತವಾಗಿತ್ತು. ಈಗಲೂ ಮಳೆ ಬಂದಾಗಲೆಲ್ಲಾ ನೀರು ಹೊರ ಹಾಕಲು ಠಾಣೆಯಲ್ಲಿ ಲಭ್ಯವಿರುವ ವಾಹನ ಮತ್ತು ಪಂಪ್‍ಗಳನ್ನು ಬಳಸಲಾಗುತ್ತಿದೆ. ಮಳೆ ತೀವ್ರವಾದಾಗ ಸಾರ್ವಜನಿಕರಿಗೆ ನೆರವಾಗಲು ತೆರಳಬೇಕೋ ಅಥವಾ ನಮ್ಮ ಕುಟುಂಬಗಳ ರಕ್ಷಣೆಯಲ್ಲಿ ತೊಡಗಬೇಕೋ ಎಂಬ ಸವಾಲು ಎದುರಾಗುತ್ತಿದೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಅಧಿಕಾರಿಗಳು ಹೇಳುತ್ತಾರೆ.
ದಾವಣಗೆರೆಯಲ್ಲಿ ಮಾತ್ರ ಸಮಸ್ಯೆ : ದಾವಣಗೆರೆ ವಲಯ ಕಚೇರಿಯ ವ್ಯಾಪ್ತಿಗೆ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳು ಒಳಪಡುತ್ತವೆ. ಎಲ್ಲ ಕಡೆ ಕಚೇರಿಗಳು ಸುಸ್ಥಿತಿಯಲ್ಲಿವೆ. ಆದರೆ, ದಾವಣಗೆರೆಯಲ್ಲಿ ಮಾತ್ರ ಸಮಸ್ಯೆ ಉಳಿದುಕೊಂಡಿದೆ.
ಅಗ್ನಿ ಶಾಮಕ ದಳದ ಸುಗಮ ಕಾರ್ಯನಿರ್ವಹಣೆಗಾಗಿ 6 ವಾಹನಗಳ ನಿಲುಗಡೆಗೆ ಅವಕಾಶವಿರುವ ಠಾಣೆ, ನೂತನ ಪ್ರಾದೇಶಿಕ ಅಗ್ನಿಶಾಮಕ ಕಚೇರಿ ಹಾಗೂ ಅಗ್ನಿಶಾಮಕ ವಸತಿ ಗೃಹದ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿ ಕಚೇರಿಗೆ ಪ್ರಸ್ತಾವನೆಯೊಂದನ್ನು ಕಳಿಸಲಾಗಿದೆ. ಆದರೆ, ಅದಕ್ಕಿನ್ನೂ ಅನುಮೋದನೆ ಸಿಗಬೇಕಿದೆ.