ನ್ಯೂನತೆ ಸರಿಪಡಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ

ನ್ಯೂನತೆ ಸರಿಪಡಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ

ಹರಿಹರ, ಜು.12- ನಗರದಲ್ಲಿ ಜಾರಿಯಾಗು ತ್ತಿರುವ ಜಲಸಿರಿ ಕುಡಿ ಯುವ ನೀರಿನ ಯೋಜನೆ ಯ ನ್ಯೂನತೆಗಳನ್ನು ಸರಿಪಡಿಸದ ಕೆಯು ಐಡಿಎಫ್‍ಸಿ, ಕೆಐಯು ಡಬ್ಲುಎಂಐಪಿ, ಪಿಐಯು ಸಂಸ್ಥೆಗಳ ಎಇ ಮತ್ತು ಎಇಇಗಳ ವಿರುದ್ಧ ಕ್ರಮಕ್ಕೆ ನಗರಸಭೆ ಪೌರಾಯುಕ್ತರು ಡಿಸಿಯವರಿಗೆ ಪತ್ರ ಬರೆದಿದ್ದಾರೆ. 

ಈ ವರ್ಷದ ಜನವರಿ 11ರಂದು ನಗರದ ತಾಲ್ಲೂಕು ಕಚೇರಿಯಲ್ಲಿ ಡಿಸಿಯವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರಕ್ಕೆ ಬಂದಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಫೋಟೋಗಳ ಸಹಿತ ಜಲಸಿರಿ ಕಾಮಗಾರಿ ನ್ಯೂನತೆಗಳ ಕುರಿತು ದೂರು ನೀಡಿದ್ದರು. 

ಡಿಸಿ ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲು ಪೌರಾ ಯುಕ್ತರಿಗೆ ಪತ್ರ ಬರೆದಿದ್ದರು. ಅದರನ್ವಯ ಆಗಿನಿಂದಲೂ ಪೌರಾ ಯುಕ್ತರು ಕೆಯುಐಡಿಎಫ್‍ಸಿ, ಕೆಐಯುಡಬ್ಲುಎಂಐಪಿ, ಪಿಐಯು ಸಂಸ್ಥೆಗಳ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‍ಗಳಿಗೆ ಹಲವು ಬಾರಿ ಪತ್ರ ಬರೆದರೂ ಫಲ ನೀಡದ್ದರಿಂದ ಪೌರಾಯುಕ್ತ ಐಗೂರು ಬಸವರಾಜ್ ಸದರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೋರಿ, ಜೂ.8 ರಂದು ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ.

ಹಲವೆಡೆ ನೆಲದೊಳಗೆ ಯುಜಿಡಿ ಪೈಪ್ ಲೈನ್ ಪಕ್ಕದಲ್ಲೇ ಜಲಸಿರಿ ಪೈಪ್‍ಲೈನ್ ಅಳವಡಿಸಲಾಗಿದೆ, ವಿವಿಧ ವಾರ್ಡುಗಳಲ್ಲಿ ಚರಂಡಿಗಳಲ್ಲೆ ಜಲಸಿರಿ ನೀರಿನ ಪೈಪ್ ಅಳವಡಿಸಲಾಗಿದೆ.

ಕಾಲ, ಕ್ರಮೇಣ ಯುಜಿಡಿ ಅಥವಾ ಚರಂಡಿಯ ತ್ಯಾಜ್ಯ ನೀರು ಜಲಸಿರಿ ಪೈಪ್‍ನೊಳಗೆ ಹರಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಆಗಿರುವ ಲೋಪಗಳನ್ನು ಸರಿಪಡಿಸಬೇಕು. ನಿರ್ಲಕ್ಷ್ಯವಹಿಸಿದ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪಿ.ಜೆ.ಮಹಾಂತೇಶ್ ಡಿಸಿಯವರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದರು. 

ಕಾಲ ಹರಣ: ದೂರು ನೀಡಿದ ಆರು ತಿಂಗಳಾದರೂ ಜಿಲ್ಲಾಡಳಿತ ಕಾಲ ಹರಣ ಮಾಡಿದೆ. ಮೇಲ್ನೋಟಕ್ಕೆ ಕಾಣುವ ಕಳಪೆ ಹಾಗೂ ನಿರ್ಲಕ್ಷ್ಯದ ಕಾಮಗಾರಿ ಕೈಗೊಂಡವರ ವಿರುದ್ಧ ಕಾನೂನು ಕ್ರಮಕೈಗೊಂಡಿಲ್ಲ. ರಾಜ್ಯದ ವಿವಿಧೆಡೆ ಕಲುಷಿತ ನೀರನ್ನು ಸೇವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಯವರ ಅಹವಾಲು ಸ್ವೀಕಾರ ಸಭೆ ಕಾಟಾಚಾರದ್ದಾಗಿದೆ ಎಂದು ಮಹಾಂತೇಶ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. 

ನೀರಿನ ಬಿಲ್ ಕಟ್ಟಬೇಡಿ: ಸರ್ಕಾರದ ಕೋಟ್ಯಾಂತರ ರೂ. ಅನುದಾನದಲ್ಲಿ ಸರ್ಕಾರದ ಏಜೆನ್ಸಿಗಳಿಂದಲೇ ನಡೆಯುತ್ತಿರುವ ಜಲಸಿರಿ ಕಾಮಗಾರಿ ನ್ಯೂನತೆಗಳಿಂದ ಕೂಡಿದೆ. ನಗರದ ಜನರ ಜೀವದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ. ಹೇಗೋ ಕಾಮಗಾರಿ ಮುಗಿಸಿ, ಜಾಗ ಖಾಲಿ ಮಾಡುವ ಧಾವಂತದಲ್ಲಿ ಜಲಸಿರಿ ಯೋಜನೆ ಅಧಿಕಾರಿಗಳಿದ್ದಾರೆ. ನ್ಯೂನತೆಗಳನ್ನು ಸರಿಪಡಿಸುವವರೆಗೂ ನಗರದ ಜನತೆ ಜಲಸಿರಿ  ನೀರಿನ ಬಿಲ್ ಶುಲ್ಕ ಪಾವತಿ ಮಾಡಬಾರದೆಂದು ಅವರು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

error: Content is protected !!