ದಾವಣಗೆರೆ, ಜು. 12 – ರೈಲ್ವೆಯ ವಿವಿಧ ವಿಭಾಗಗಳ ಸಿಬ್ಬಂದಿಗಳು ತಮ್ಮ ಕರ್ತವ್ಯ ಸಮಯದಲ್ಲಿ ಕರ್ತವ್ಯ ಪ್ರಜ್ಞೆ ಮತ್ತು ವೃತ್ತಿಪರತೆಯಲ್ಲಿ ವಿಶೇಷ ಸಾಧನೆಗೈದ ಸಿಬ್ಬಂದಿಗಳಿಗೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಗಳಿಗೆ ಭಾಜನರಾದ ಸಿಬ್ಬಂದಿಗಳ ವಿವರ :
Φ ಮುಖೇಶ ಕುಮಾರ ಮತ್ತು ಆಕಾಶ ಚಿಕಟೆ ಖುಶಾಬ್ : ಮುಖೇಶ ಕುಮಾರ್ ಅವರು ಹೊಳಲ್ಕೆರೆಯಲ್ಲಿ ಗ್ಯಾಂಗ್ಮೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕಾಶ ಚಿಕಟೆ ಖುಶಾಬ್ ಅವರು ರಾಮಗಿರಿಯಲ್ಲಿ ಸ್ಟೇಷನ್ ಮ್ಯಾನೇಜರ್ ಆಗಿದ್ದಾರೆ. ಮುಖೇಶ್ ಕುಮಾರ್ ಅವರು ಮೇ 29 ರಂದು ಕೆಲಸದ ಸಮಯದಲ್ಲಿ ಗೂಡ್ಸ್ ರೈಲಿನ ವ್ಯಾಗನ್ಯೊಂದರ ಬಾಗಿಲು ತೆರೆದಿರುವುದನ್ನು ಗಮನಿಸಿ, ಸಂಬಂಧಿಸಿದ ಮೇಲಾಧಿಕಾರಿ ಮತ್ತು ರಾಮಗಿರಿಯಲ್ಲಿರುವ ಸ್ಟೇಷನ್ ಮ್ಯಾನೇಜರ್ ಆಕಾಶ ಚಿಕಟೆ ಖುಶಾಬ್ ಅವರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣವೇ ಗೂಡ್ಸ್ ರೈಲು ನಿಲ್ಲಿಸಿದ ಪರಿಣಾಮ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
Φ ರವಿ ಇ. ನಾಯ್ಡು : ರವಿ ಇ. ನಾಯ್ಡು ಅವರು ಬೆಂಗಳೂರಿನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 27 ರಂದು ಬೆಂಗಳೂರಿನಿಂದ ಬಂಗಾರಪೇಟೆ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಮಯದಲ್ಲಿ ರೈಲಿನ ಬೋಗಿಯೊಂದರಲ್ಲಿ ಕರ್ಕಶ ಶಬ್ಧ ಕೇಳಿಸಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಿಳಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮುಂದಿನ ನಿಲ್ದಾಣದಲ್ಲಿ ಸುರಕ್ಷತಾ ಕ್ರಮಕೈಗೊಂಡು ರೈಲನ್ನು ನಿಲ್ಲಿಸಿದ ಪರಿಣಾಮ ಮುಂದೆ ಸಂಭವಿಸಬಹುದಾದ ಅವಘಡವನ್ನು ತಪ್ಪಿಸಿದಂತಾಗಿದೆ.
Φ ಖಾದರ್ ನವಾಜ್ ಖಾನ್ : ಖಾದರ್ ನವಾಜ್ ಖಾನ್ ಅವರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನ ಸಿ ಅಂಡ್ ಡಬ್ಲ್ಯೂ ವಿಭಾಗದಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 30 ರಂದು ರೈಲಿನ ಸುರಕ್ಷತಾ ತಪಾಸಣೆ/ದುರಸ್ತಿಯ ಸಂದರ್ಭದಲ್ಲಿ ಪ್ರಾಥಮಿಕ ಸ್ಟ್ರಿಂಗ್ ಬ್ರೇಕೇಜ್ ಆಕ್ಸಲ್ನಲ್ಲಿ ತಾಂತ್ರಿಕ ತೊಂದರೆಯನ್ನು ಗಮನಿಸಿದ್ದಾರೆ. ಮುಂದೆ ರೈಲು ಚಲಿಸುವ ಸಮಯದಲ್ಲಿ ಬೋಗಿಗಳು ಬೇರ್ಪಟ್ಟು ಅಪಾಯವಾಗುವ ಸಂಭವ ಇರುತ್ತದೆ. ಕರ್ತವ್ಯ ಸಮಯದಲ್ಲಿ ಅತ್ಯಂತ ಜಾಗೃತಿ ವಹಿಸಿ ಪತ್ತೆ ಹಚ್ಚಿದ್ದಾರೆ.
Φ ಪ್ರಭಾತ್ ಕುಮಾರ್ ಮಂಡಲ್ : ಪ್ರಭಾತ್ ಕುಮಾರ್ ಮಂಡಲ್ ಅವರು ಸ್ಯಾನ್ವರ್ಡೆಂ – ಕೂರ್ಚೋರೆಂ ನಿಲ್ದಾಣ ಸಮೀಪದ ಗೇಟ್ ನಂ-26ರಲ್ಲಿ ಗೇಟ್ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 30 ರಂದು ರಾತ್ರಿ ಕೆಲಸದ ಸಮಯದಲ್ಲಿ ಗೂಡ್ಸ್ ರೈಲಿನ ವ್ಯಾಗನ್ಯೊಂದರಲ್ಲಿನ ಹಾಟ್ ಆಕ್ಸಲ್ ಆಗಿರುವುದನ್ನು ಗಮನಿಸಿ, ಮುಂದಿನ ಸ್ಟೇಷನ್ ಮ್ಯಾನೇಜರ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಇದರಿಂದ ಮುಂದೆ ಆಗಬಹುದಾದ ಅವಘಡವನ್ನು ತಪ್ಪಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಖಾದರ್ ನವಾಜ್ ಖಾನ್ ಮತ್ತು ಜೀತ್ರೇಂದ್ರ ಕುಮಾರ್ : ಖಾದರ್ ನವಾಜ್ ಖಾನ್ ಮತ್ತು ಜಿತೆಂದ್ರ ಕುಮಾರ್ ಅವರುಗಳು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನ ಸಿ ಅಂಡ್ ಡಬ್ಲ್ಯೂ ವಿಭಾಗದಲ್ಲಿ ಜ್ಯೂನಿಯರ್ ಎಂಜಿನಿಯರ್ ಮತ್ತು ಟೆಕ್ನೀಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 30 ರಂದು ರೈಲಿನ ಸುರಕ್ಷತಾ ತಪಾಸಣೆ/ದುರಸ್ತಿಯ ಸಂದರ್ಭದಲ್ಲಿ ಬೋಗಿಯ ಪ್ರಾಥಮಿಕ ಸ್ಟ್ರಿಂಗ್ ಬ್ರೇಕೇಜ್ ಆಕ್ಸಲ್ನಲ್ಲಿ ತಾಂತ್ರಿಕ ತೊಂದರೆಯಿಂದ ಗ್ರೀಸ್ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ್ದಾರೆ. ಇಲ್ಲದಿದ್ದರೆ ರೈಲು ಮುಂದೆ ಚಲಿಸುವ ಸಮಯದಲ್ಲಿ ಬೋಗಿಗಳು ಬೇರ್ಪಟ್ಟು ಅವಘಡ ಸಂಭವಿಸುವ ಅವಕಾಶವನ್ನು ತಪ್ಪಿಸಿರುತ್ತಾರೆ.
ತುರ್ತು ಸಂದರ್ಭಗಳಲ್ಲಿ ಸಮಯ ಪ್ರಜ್ಞೆ ತೋರಿದ ರೈಲ್ವೆ ಸಿಬ್ಬಂದಿಗಳಿಗೆ ಪ್ರಧಾನ ವ್ಯವಸ್ಥಾಪಕರು ಸನ್ಮಾನಿಸಿದರು.
ಸಮಾರಂಭದಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಯು. ಸುಬ್ಬರಾವ್, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎ.ಪಿ. ಶರ್ಮಾ ಹಾಗೂ ಎಲ್ಲಾ ವಿಭಾಗದ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.