ಪಡೆವ ಕೈ ಶುದ್ಧವಾಗಿದ್ದರೆ ಕೊಡುವ ಕೈ ಕೊರತೆ ಕಾಣದು

ಪಡೆವ ಕೈ ಶುದ್ಧವಾಗಿದ್ದರೆ ಕೊಡುವ ಕೈ ಕೊರತೆ ಕಾಣದು

ಉಚಿತ ರಗ್, ಬೆಡ್‌ಶೀಟ್ ವಿತರಣಾ ಸಮಾರಂಭದಲ್ಲಿ  ಸತ್ಯ ಸಾಯಿ ಸಮಿತಿ ಸಂಯೋಜಕಿ ಎಂ.ಯೋಗಿತಾ  

ಹರಿಹರ, ಜು,12-  ದಾನವನ್ನು ಪಡೆಯುವ ಕೈಗಳು ಪರಿಶುದ್ಧವಾಗಿದ್ದರೆ, ಕೊಡುವಂತಹ ಕೈಗಳಿಗೆ ಕೊರತೆ ಬರುವುದಿಲ್ಲ  ಎಂದು ಸತ್ಯ ಸಾಯಿ ಸೇವಾ ಸಮಿತಿಯ ಮಹಿಳಾ ಸಂಯೋಜಕರಾದ ಎಂ. ಯೋಗಿತಾ ಅಭಿಪ್ರಾಯಿಸಿದರು. 

ನಗರದ ಅಮರಾವತಿ ಬಳಿ ಇರುವ ಶ್ರೀ ಮರುಳಸಿದ್ಧೇಶ್ವರ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲಾ ಮಕ್ಕಳಿಗೆ ಸತ್ಯ ಸಾಯಿ ಸೇವಾ ಸಮಿತಿಯ ವತಿಯಿಂದ ಉಚಿತ ರಗ್, ಬೆಡ್‌ಶೀಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ಮಾಡುವ ಪ್ರತಿಯೊಂದು ಸಮಾಜ ಮುಖಿ ಕಾರ್ಯಕ್ಕಾಗಿ ದಾನಿಗಳ ಸಹಕಾರ ಬಹುಮುಖ್ಯವಾಗಿ ಇರುತ್ತದೆ. ಆದರೆ ದಾನಿಗಳಿಂದ ಪಡೆಯವ ಸಮಯದಲ್ಲಿ ಅವರ ಮನಸ್ಸಿಗೆ ತಟ್ಟುವಂತೆ ಸಮಸ್ಯೆಗಳ ವಿಚಾರ ಗಳನ್ನು ತಿಳಿಸಿದಾಗ ಅಗತ್ಯವಿರುವ ವಸ್ತುಗಳನ್ನು ಪೂರೈಸಿಕೊಳ್ಳಬಹುದು.   ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುವ ಸಮಯದಲ್ಲಿ ದಾನಿಗಳಿಂದ ಪಡೆದು ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿದಾಗ ಕೊಟ್ಟಂತಹ ದಾನಿಗಳಿಗೆ ಶ್ರೇಯಸ್ಸು ಮತ್ತು ಪಡೆದುಕೊಂಡು ಸಮಾಜಕ್ಕೆ ಒಳ್ಳೆಯದು ಮಾಡಿದವರಿಗೂ ಶ್ರೇಯಸ್ಸು ಲಭಿಸುತ್ತದೆ ಎಂದು ಹೇಳಿದರು.

ಸತ್ಯ ಸಾಯಿ ಸೇವಾ ಸಮಿತಿಯ ಕೃಷ್ಣಪ್ಪ ಮಾತನಾಡಿ,  ಹಿಂದೆ ಇಲ್ಲಿನ ಮಕ್ಕಳಿಗೆ ಸತ್ಯ ಸಾಯಿ ಸೇವಾ ಸಮಿತಿಯ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾದ ಸಂದರ್ಭದಲ್ಲಿ ಮಕ್ಕಳಿಗೆ ಬೆಡ್ ಶೀಟುಗಳ ಕೊರತೆ ಇರುವುದನ್ನು ಮನಗಂಡು ಈಗ ಮಕ್ಕಳಿಗೆ ಉಚಿತವಾಗಿ ಬೆಡ್ ಸೀಟುಗಳನ್ನು ವಿತರಣೆ ಮಾಡಲಾಗು ತ್ತಿದೆ. ಇದಕ್ಕೆ ಸಹಕರಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.  

ರೈತ ಸಂಘದ ಮುಖಂಡ ಪರಮೇಶ್ವರಪ್ಪ ಮಾತನಾಡಿ, ಮಾನವನ ಸೇವೆ ದೇವರ ಸೇವೆ ಎಂದು ಭಾವಿಸಿ ಯಾರು ಶ್ರಮಿಸುತ್ತಾರೋ ಅವರನ್ನು ಸಮಾಜ ಗೌರವಿಸುತ್ತದೆ. ಪುಟ್ಟಪರ್ತಿ ಸಾಯಿಬಾಬಾ ಮಂದಿರದಲ್ಲಿ, ಭಕ್ತರು ಎಷ್ಟೇ ಸಿರಿವಂತರ ಸಾಲಿನಲ್ಲಿ ಇದ್ದರೂ ಎಲ್ಲರಂತೆ  ಸೇವೆಯನ್ನು ಅರ್ಪಿಸಲು ಮುಂದಾಗುತ್ತಾರೆ. ಅಲ್ಲಿನ ವ್ಯವಸ್ಥೆ ನಮಗೆ ಒಳ್ಳೆಯ ಕೆಲಸವನ್ನು ಮಾಡ ಬೇಕೆಂದು ಪ್ರೇರಣೆ ನೀಡಿತು ಎಂದು ಹೇಳಿದರು.

ಶಂಕರ್ ಕುಲಕರ್ಣಿ ಮಾತನಾಡಿ, ಮನೆಯಲ್ಲಿ ಒಂದು ಮಗು ಅಂಗವಿಕಲವಾಗಿ ಜನಿಸಿದ ಸಮಯದಲ್ಲಿ ಅದರ ಬಗ್ಗೆ ತಾತ್ಸಾರ ಮಾಡುವುದು ಸರ್ವೇ ಸಾಮಾನ್ಯ, ಆದರೆ ಸಂಸ್ಥೆಯು ಅಂಗವಿಕಲರಿಗೆ ಆಸರೆಯಾಗಿರುವುದು  ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. 

ಮರುಳಸಿದ್ದೇಶ್ವರ ಬುದ್ದಿಮಾಂದ್ಯ ಮಕ್ಕಳ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹೇಶ್ವರಪ್ಪ ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಸುಮಾರು 80 ಬುದ್ದಿಮಾಂದ್ಯ ಮಕ್ಕಳಿಗೆ ಶಿಕ್ಷಣ, ವಸತಿ ಸೌಕರ್ಯ ಒದಗಿಸುವ ಕಾರ್ಯವನ್ನು ಮೂರು ದಶಕಗಳಿಂದ ಮಾಡುತ್ತಾ ಬಂದಿದ್ದು, ದಾನಿಗಳೂ ಸಹ ತಮ್ಮ ಶಕ್ತಿ ಅನುಸಾರ ದಾನವಾಗಿ ವಿವಿಧ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಅದನ್ನು ಸರಿಯಾದ ರೀತಿಯಲ್ಲಿ  ಸದ್ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್.ಬಿ. ಮಹಾಜನ್ ಶೆಟ್ಟಿ, ವೀರಣ್ಣ ಫೈನಾನ್ಸ್, ಮಹೋನ್, ಹರೀಶ್ ಪಾಟೀಲ್, ನಾಗರಾಜ್ ಪೂಜಾರ್, ಶಂಕರ್ ಕುಲಕರ್ಣಿ, ಅನುಸೂಯಮ್ಮ, ಪಾಪಮ್ಮ, ಗೀತಾ ಕಬಾಡೆ, ಶಶಿಕಲಾ, ಸುಜಾತಮ್ಮ, ಮಂಗಳಮ್ಮ, ಕವಿತಾ, ಶಿಕ್ಷಕಿ  ಎಂ.  ಶೋಭಾ, ಹಾಲಮ್ಮ, ಬಿ.ಎಸ್. ಶೋಭಾ, ಎಂ.ಮಮತಾ, ಪ್ರೇಮ, ಅನಿತಾ, ರಾಖೇಶ್  ಇತರರು ಹಾಜರಿದ್ದರು. 

error: Content is protected !!