ಮುನಿಗಳ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ

ಮುನಿಗಳ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ

ಹರಪನಹಳ್ಳಿ, ಜು.12- ಚಿಕ್ಕೋಡಿ ಸಮೀಪ ಹಿರೇಕೋಡಿಯಲ್ಲಿ ಕಾಮಕುಮಾರ ನಂದಿ ಜೈನ ಮುನಿಗಳ ಬರ್ಬರ ಹತ್ಯೆ ಖಂಡಿಸಿ, ಶ್ರೀ ಶಾಂತಿನಾಥ ದಿಗಂಬರ ಜೈನ ಕೋಟೆ ಬಸದಿ ಟ್ರಸ್ಟ್  ಆಶ್ರಯದಲ್ಲಿ  ಜೈನ ಸಮುದಾಯದವರು ಪಟ್ಟಣದಲ್ಲಿ  ಇಂದು ಮೌನ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸ್ಥಳೀಯ ಜೈನರ ಓಣಿಯಲ್ಲಿ ಇರುವ ಆದಿನಾಥ ತೀರ್ಥಂಕರ ಜೈನ ಬಸದಿಯಿಂದ ಮೌನ ಪ್ರತಿಭಟನೆ ಮೂಲಕ ಮೆರವಣಿಗೆ ಹೊರಟ ಜೈನ ಸಮಾಜದವರು ತಾಲ್ಲೂಕು ಆಡಳಿತ ಸೌಧಕ್ಕೆ ಆಗಮಿಸಿ, ಬಹಿರಂಗ ಸಭೆ ನಡೆಸಿದರು.

ಶ್ರೀಶಾಂತಿನಾಥ ದಿಗಂಬರ ಜೈನ ಕೋಟೆ ಬಸದಿ ಟ್ರಸ್ಟ್ ಅಧ್ಯಕ್ಷ ಎಚ್.ಪದ್ಮನಾಭ ಮಾತನಾಡಿ, ಜೈನಮುನಿಯೊಬ್ಬರ ಬರ್ಬರ ಹತ್ಯೆಯಿಂದ ಜೈನ ಸಮಾಜ ಆಘಾತಗೊಂಡಿದೆ, ಜೈನ ಮುನಿಗಳಿಗೆ ರಕ್ಷಣೆ ಇಲ್ಲವಾಗಿದೆ, ಜೈನಮುನಿಗಳು ಅಪಾಯದ ಕಕ್ಷೆಯೊಳಗೆ ಉಸಿರು ಬಿಗಿ ಹಿಡಿದು ಧರ್ಮ ಪಾಲನೆ ಮಾಡುವಂತಾಗಿದೆ. ಜೈನ ಧಾರ್ಮಿಕ ಮುಖಂಡರ ಮೇಲೆ ಬೆದರಿಕೆಯ ವಾತಾವರಣ ಆವರಿಸಿಕೊಂಡಿದೆ, ಧಾರ್ಮಿಕ ಮುಖಂಡರ ಹಿರಿಮೆಯನ್ನು ಕುಂಠಿತಗೊಳಿಸುವ ಹುನ್ನಾರ ಕೆಲವು ಶಕ್ತಿಗಳಿಂದ ನಡೆಯುತ್ತಲಿದೆ ಎಂದು ಅವರು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ಯು.ಪಿ.ನಾಗರಾಜ ಮಾತನಾಡಿ, ಜೈನರಲ್ಲಿ ಅಭದ್ರತೆ ಮೂಡುತ್ತಿದೆ. ಕುತ್ಸಿತ ಶಕ್ತಿಗಳು ಜೈನ ಧರ್ಮದ ವಿಚಾರವಾಗಿ ಯಾವುದೋ ಅಗೋಚರ ಶಕ್ತಿ ಕೆಲಸ ಮಾಡುತ್ತಿದೆ. ಆ ಶಕ್ತಿಯು ಜೈನ ಧರ್ಮದ ಮೇಲೆ ದ್ವೇಷದ ಭಾವನೆಯನ್ನು ಇಟ್ಟುಕೊಂಡು, ತೆರೆಯ ಹಿಂದೆ ಕೆಲಸ ಮಾಡುತ್ತಿದೆ. ಪ್ರಸ್ತುತ ಜೈನ ಸಮಾಜ ಅಪಾಯದಲ್ಲಿದೆ, ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಾಗಿರುವ ಜೈನರಿಗೆ ರಕ್ಷಣೆ ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ನ್ಯಾಯಯುತವಾಗಿ ಜೈನ ಧರ್ಮೀಯರಿಗೆ ಸರ್ಕಾರ ಸಂವಿಧಾನ ರೀತ್ಯ ಸೌಲಭ್ಯಗಳನ್ನು ಹಾಗೂ ಹಕ್ಕುಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಜೈನ ಸಮಾಜಕ್ಕೆ ರಕ್ಷಣೆ ಒದಗಿಸಿ, ತಪ್ಪಿಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಸಹ ಕಾರ್ಯದರ್ಶಿ ಎಂ.ಕೆ.ಅಜಯಕುಮಾರ್, ಖಜಾಂಚಿ ಬಿ.ಪದ್ಮರಾಜ್, ಸದಸ್ಯರುಗಳಾದ ಅನಂತರಾಜ ಸಗರಿ, ಓ.ಕೆ.ಪದ್ಮರಾಜ, ಎಚ್.ಬಿ.ಮಹಾವೀರ, ರಾಯಪ್ಪ ಇಜಾರಿ, ಇಜಾರಿ ಮಹಾವೀರ, ಶೀತಲ್ ಪ್ರಸಾದ, ಕೆ.ಶಾಂತರಾಜ, ಪ್ರಸನ್ನಕುಮಾರ ಜೈನ್, ಅಶೋಕ, ಗೌತಮ್ ಜೈನ್, ವಿಜಯರಾಜ, ರಾಕೇಶ್, ಮಹಾವೀರ ಭಂಡಾರಿ, ಮೆಣಸಿನಕಾಯಿ ಅಶೋಕ, ಅರುಣಕುಮಾರ, ನಯನ ಪದ್ಮರಾಜ್, ವೀಣಾ ಪಂಡಿತ, ಪದ್ಮ ಜೈನ್, ಯು.ಪಿ.ಸುಜಾತ, ತನುಶ್ರೀ, ರಕ್ಷಿತ, ನಳಿತಾ ಮೆಣಸಿನಕಾಯಿ, ಚಂದ್ರಪ್ರಭ ಪಂಡಿತರು ಸೇರಿದಂತೆ ಜೈನ ಸಮುದಾಯದವರು ಪಾಲ್ಗೊಂಡಿದ್ದರು.

error: Content is protected !!