ಎಎಸ್‍ಐ ಜಯಪ್ಪ
ದಾವಣಗೆರೆ, ಜು. 12- ವಾಹನಗಳು ಯಾವುದೇ ಇರಲಿ, ಚಲಾಯಿಸಲು ಅನುಮತಿ ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸ ಬೇಕು ಎಂದು ಸಂಚಾರಿ ಪೊಲೀಸ್ ವೃತ್ತ ವಿಭಾಗದ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಜಯಪ್ಪ ತಿಳಿಸಿದರು.
ನಗರದ ಗಂಗೂಬಾಯಿ ಹಾನಗಲ್ ಪಾರ್ಕ್ (ಟ್ರಾಫಿಕ್ ಪಾರ್ಕ್)ನಲ್ಲಿ ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕರ್ನಾಟಕ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ಮಕ್ಕಳಿಗೆ ಆಯೋಜಿಸಿದ್ದ ಸಂಚಾರಿ ನಿಯಮಗಳ ಜಾಗೃತಿ, ಅರಿವು ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ವಾಹನಗಳಲ್ಲಿ 3 ಜನರು ತೆರಳಬಾರದು, ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಬಾರದು. ಅಪ್ರಾಪ್ತರಾದ ನೀವುಗಳು 18 ವರ್ಷವಾದ ನಂತರ ಅನುಮತಿ ಪತ್ರವನ್ನು ಪಡೆದ ನಂತರ ವಾಹನಗಳನ್ನು ಚಲಾಯಿಸಬೇಕು.
ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಬಾರದು, ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು ಸೇರಿದಂತೆ ಹಲವಾರು ಸಂಚಾರಿ ನಿಯಮಗಳ ಕುರಿತು ಮಾಹಿತಿ ನೀಡಿದ ಅವರು, ಏನೇ ತಪ್ಪುಗಳು ಕಂಡುಬಂದಲ್ಲಿ ಇಲಾಖೆಯಿಂದ ದಂಡ ವಿಧಿಸಲಾಗುವುದು. ಇಲ್ಲದೇ ಇದ್ದರೆ ಅವರ ಹೆಸರಿಗೆ ದಂಡದ ನೋಟೀಸ್ ತಲುಪಿಸಲಾಗುವುದು ಎಂದರು.
ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಸವರಾಜ್, ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ಸ್, ಬುಲ್ ಬುಲ್ಸ್ ಮಕ್ಕಳಿಗೆ ಪಾರ್ಕ್‍ನಲ್ಲಿರುವ ಟ್ರಾಫಿಕ್ ರೂಲ್ಸ್ ಫಲಕಗಳನ್ನು ತೋರಿಸಿ, ಅವುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಕೌಟ್ ಮಾಸ್ಟರ್ ಟಿ.ಎಂ.ರವೀಂದ್ರ ಸ್ವಾಮಿ, ಶಶಿಕುಮಾರ್, ಗೈಡ್ ಕ್ಯಾಪ್ಟನ್ ಅನಿತಾ ಹಾಗೂ ಎಚ್.ಎಂ. ರಜನಿ, ಪೋಷಕರು ಹಾಗೂ ಸೆಂಟ್ ಫಾಲ್ಸ್ ಹೈಸ್ಕೂಲ್ ಗೈಡ್ಸ್ ಹಾಗೂ ಸೆಂಟ್ ಫಾಲ್ಸ್ ಸೆಂಟ್ರಲ್ ಸ್ಕೂಲ್ ಗೈಡ್ಸ್, ಶ್ರೀ ತರಳಬಾಳು ಶಾಲೆಯ ಗೈಡ್ಸ್, ಸ್ಕೌಟ್ಸ್, ಕಬ್ಸ್, ಬುಲ್ ಬುಲ್ಸ್, ಮಾಗನೂರು ಬಸಪ್ಪ ಸ್ಕೌಟ್ಸ್, ಬಾಪೂಜಿ ಓಪನ್ ಸ್ಕೌಟ್ ಟ್ರೂಪ್, ಮದರ್ ತೆರೇಸಾ ಗೈಡ್ ಕಂಪನಿ ಮಕ್ಕಳು ಭಾಗವಹಿಸಿದ್ದರು.