ಜಿಯೋ, ಏರ್‌ಟೆಲ್ ಸೆಟ್‌ಅಪ್ ಬಾಕ್ಸ್ ಅಳವಡಿಕೆ ತಡೆಯಲು ಆಗ್ರಹ

ಜಿಯೋ, ಏರ್‌ಟೆಲ್ ಸೆಟ್‌ಅಪ್ ಬಾಕ್ಸ್ ಅಳವಡಿಕೆ ತಡೆಯಲು ಆಗ್ರಹ

ದಾವಣಗೆರೆ, ಜು. 11- ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೇಬಲ್ ಟಿವಿಗಳಿಗೆ ಅಳವಡಿಸುತ್ತಿರುವ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳ ಸೆಟ್‌ಅಪ್ ಬಾಕ್ಸ್ ತಡೆಯುವಂತೆ ಆಗ್ರಹಿಸಿ ಕರವೇ ಜಿಲ್ಲಾ ಘಟಕ, ದಾವಣಗೆರೆ ನಗರ ಮತ್ತು ಗ್ರಾಮಾಂತರ ಕೇಬಲ್ ಆಪರೇಟರ್ ಅಸೋಸಿಯೇಷನ್ ವತಿಯಿಂದ ಇಂದು ಬೈಕ್‌ ರಾಲಿ ನಡೆಸಲಾಯಿತು.

ಶಾಮನೂರು ರಸ್ತೆಯಲ್ಲಿನ ಕಾಸಲ್ ವಿಠಲ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರಾಲಿ ಹೊರಟು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು, ಹೊರ ರಾಜ್ಯದ ಖಾಸಗಿ ಕಂಪ ನಿಗಳು ನಡೆಸುತ್ತಿರುವ ದಾಳಿಯನ್ನು ಕರವೇ ಖಂಡಿಸುತ್ತದೆ. ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಕೇಬಲ್ ಮೂಲಕ ಸಮಸ್ತ ನಾಗರಿಕರಿಗೆ ಮನರಂಜನೆ, ಸುದ್ಧಿ ಪ್ರಸಾರ ಮಾಡುತ್ತಿರುವ ಕೇಬಲ್ ಆಪರೇಟರ್‌ಗಳ ಬದುಕು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಈಗಾಗಲೇ ನಗರದಲ್ಲಿ ಸ್ಥಳೀಯ ಐದು ಕೇಬಲ್‌ ನೆಟ್‌ವರ್ಕ್‌ಗಳಾದ ಮೆಟ್ರೋ ಕಾಸ್ಟ್ ಬಸವ ಕೇಬಲ್ ನೆಟ್‌ವರ್ಕ್, ಗ್ಲೋಬಲ್ ವ್ಹಿಜನ್, ಹಾಥ್ ವೇ ಡಿಜಿಟಲ್ ಲಿಮಿಟೆಡ್ ಮತ್ತು ವಿಕ್ಟರಿ ಡಿಜಿಟಲ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಕೇಬಲ್ ಆಪರೇಟರ್‌ಗಳೇ ಜೀವಾಳ ಎಂದರು.

ಜಿಯೋ, ಏರ್‌ಟೆಲ್ ಕಂಪನಿಯವರು ರಾಜ್ಯಾದ್ಯಂತ ಯೂನಿಫೈಡ್ ಟೆಲಿಕಾಂ ಲೈಸನ್ಸ್ ಹೊಂದಿದ್ದು,  ಇವರಿಗೆ ಕೇಬಲ್ ಟಿವಿ ಸಂಪರ್ಕ ಕೊಡುವ ಹಕ್ಕಿರುವುದಿಲ್ಲ. ಆದರೂ ಅನಧಿಕೃತವಾಗಿ ನೀಡುತ್ತಿದ್ದು, ಕೇಬಲ್ ಆಪರೇಟರ್ ಗಳ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹೇಳಿದರು. ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಯವರು ಇಂಟರ್‌ನೆಟ್ ಸೇವೆಯನ್ನು ಸಾರ್ವಜನಿಕರಿಗೆ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಇ ಸೇವೆಯ ಜೊತೆಗೆ ಕೇಬಲ್ ಟಿವಿ ಸಂಪರ್ಕ ಕೊಡಲು ಮುಂದಾಗಿದ್ದಾರೆ. ಇದಕ್ಕೆ ಕರವೇ ಹಾಗೂ ನಗರ ಮತ್ತು ಗ್ರಾಮಾಂತರ ಕೇಬಲ್ ಆಪರೇಟರ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ 35 ವರ್ಷಗಳಿಂದ 400 ಕ್ಕೂ ಹೆಚ್ಚು ಕೇಬಲ್ ಆಪರೇಟರ್‌ಗಳು ಸಣ್ಣ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಜಿಯೋ ಕಂಪನಿ ಈ ಬದುಕನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ. ಇದರಿಂದ ಒಂದು ಸಾವಿರ ಜನ ಬೀದಿಗೆ ಬೀಳುಂತಾಗಿದೆ. ಇವರೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಹೊರ ರಾಜ್ಯದಿಂದ ಬಂದಂತಹ ಇಂತಹ ಕಂಪನಿಯವರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಓ. ಮಹೇಶ್ವರಪ್ಪ, ಸುನೀಲ್ ಜಾಧವ್, ಬಾಬುರಾವ್, ನಾಗರಾಜಯ್ಯ, ಕೇಶವ್‌ಗೌಡ, ಸುನೀಲ್, ಶಾಂತಪ್ಪ, ಮಹಾಂತೇಶ್, ಹಿದಾಯತ್, ಸವಿತಾ, ಗೌರಮ್ಮ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮಂಜುಳಾ ಮಹಾಂತೇಶ್,  ಗಣೇಶ್, ಸಂತೋಷ್, ರಫೀಕ್, ಜಬೀವುಲ್ಲಾ, ಮಲ್ಲಿಕಾರ್ಜುನ್, ಖಾದರ್ ಬಾಷಾ, ಹನುಮಂತಪ್ಪ,  ನಾಗರಾಜ್, ರವಿಕುಮಾರ್, ಮಧು, ಮಂಜುನಾಥ್, ಕರಿಬಸವರಾಜ್, ಮಲ್ಲಿಕಾರ್ಜುನ್, ಜಯಪ್ಪ, ಮೂರ್ತಿ, ಉಮೇಶ್, ರಾಜು, ಹಾಲೇಶ್, ಮಂಜಣ್ಣ, ಬಸಣ್ಣ ಮತ್ತಿತರರಿದ್ದರು.

error: Content is protected !!