ಚನ್ನಗಿರಿ, ಜು.10- ತಾಲ್ಲೂಕಿನ ಪುಟ್ಟಹಳ್ಳಿಗೆ ಶಾಸಕ ಬಸವರಾಜು ವಿ. ಶಿವಗಂಗಾ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿದರು. ತಾಲ್ಲೂಕಿನ ಹೊನ್ನೇಮರದಹಳ್ಳಿ ಹಾಗೂ ಬೊಮ್ಮೇನಹಳ್ಳಿ ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ ಶಾಸಕ ಬಸವರಾಜು ವಿ. ಶಿವಗಂಗಾ ಅವರಿಗೆ ಗ್ರಾಮಸ್ಥರು ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ನಾಳೆಯೇ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದರು. ಶಾಸಕರ ಸೂಚನೆಯಂತೆ ಹೊನ್ನೇಮರದಹಳ್ಳಿ ಗ್ರಾಮಕ್ಕೆ ಸೋಮವಾರ ಮಧ್ಯಾಹ್ನ 3.30 ಕ್ಕೆ ಸರ್ಕಾರಿ ಬಸ್ ಆಗಮಿಸಿತು.
ಈ ವೇಳೆ ಗ್ರಾಮಸ್ಥರು ಸಂತೋಷದಿಂದ ಮೊದಲ ಬಾರಿಗೆ ಬಂದ ಸರ್ಕಾರಿ ಬಸ್‍ಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಸ್ ವ್ಯವಸ್ಥೆಗೆ ಚಾಲನೆ ನೀಡಿದರು. ಸ್ವಾತಂತ್ರ್ಯದ ಬಳಿಕ ಮೊಟ್ಟ ಮೊದಲ ಬಾರಿಗೆ ಹೊನ್ನೇಮರದಹಳ್ಳಿ ಹಾಗೂ ಬೊಮ್ಮೇನಹಳ್ಳಿ ಗ್ರಾಮಕ್ಕೆ ಸರ್ಕಾರಿ ಬಸ್ ಬಂದಂತಾಗಿದೆ. ಈ ಎರಡೂ ಗ್ರಾಮಗಳ ಜನರು ಸ್ವಂತ ವಾಹನ ಇಲ್ಲವೇ ನಡೆದುಕೊಂಡು ಹೋಗಬೇಕಿತ್ತು.
ಈ ನಡುವೆ ಶಾಲಾ-ಕಾಲೇಜ್‌ಗೆ ಹಾಗೂ ಜಿಲ್ಲಾ, ತಾಲ್ಲೂಕು ಕೇಂದ್ರಕ್ಕೆ ಹೋಗಲು ಸಮಸ್ಯೆ ಉಂಟಾಗುತ್ತಿತ್ತು. ಇದೀಗ ಶಾಸಕರ ಇಚ್ಛಾಶಕ್ತಿಯಿಂದ ಎರಡೂ ಗ್ರಾಮಗಳ ಜನರಿಗೆ ಸಾರಿಗೆ ವ್ಯವಸ್ಥೆ ಸಿಕ್ಕಂತಾಗಿದೆ.